ಜಿಲ್ಲೆ

ಪಾಳು ಬಿದ್ದಿವೆ ಎಪಿಎಂಸಿ ಉಪ ಮಾರುಕಟ್ಟೆ

ಸೋಮನಾಥ ರೆಡ್ಡಿ

ನರಗುಂದ: ರೈತರು ಮತ್ತು ವ್ಯಾಪಾರಸ್ಥರ ಕೊಂಡಿಯಾಗಿ ಸರ್ವರನ್ನೂ ಸೆಳೆಯಬೇಕಿದ್ದ ತಾಲೂಕಿನ ಕೊಣ್ಣೂರ ಮತ್ತು ಶಿರೋಳದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮಿತಿಗಳು ಮೂಲ ಸೌಕರ್ಯಗಳಿಲ್ಲದೇ ಪಾಳು ಬಿದ್ದಿವೆ.

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಆದಾಯವು ಕಡಿಮೆಯಾಗಿದ್ದು ಸೂಕ್ತ ನಿರ್ವಹಣೆ ಇಲ್ಲದೇ ದಾರಿ ಹೋಕರಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.

ಸದಾ ಅನಿಶ್ಚಿತತೆಯಿಂದ ಬದುಕು ಸಾಗಿಸುತ್ತಿರುವ ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡಬೇಕು ಎನ್ನುವ ಸದುದ್ದೇಶದಿಂದ ತಾಲೂಕಿನ ಕೊಣ್ಣೂರಿನ 15 ಎಕರೆ 32 ಗುಂಟೆ ಪ್ರದೇಶದಲ್ಲಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯನ್ನು 1990ರಲ್ಲಿ ಪ್ರಾರಂಭಿಸಲಾಯಿತು.

ಇದಕ್ಕೂ ಮೊದಲು 1988ರಲ್ಲಿ ಶಿರೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭಿಸಲಾಗಿದೆ. ಕೊಣ್ಣೂರಿನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಒಟ್ಟು 60 ನಿವೇಶನಗಳಿವೆ. ಇದರಲ್ಲಿ 1 ಹರಾಜು ಮಾರುಕಟ್ಟೆ, 4 ವರ್ತಕರ ಮಳಿಗೆ, 1 ಕಚೇರಿ ಮತ್ತು ಗೋದಾಮು, 2 ರೈತ ಸಂಪರ್ಕ ಕೇಂದ್ರ, 4 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಒಂದು ವರ್ತಕರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ, ಒಬ್ಬ ವರ್ತಕರು ಮಾತ್ರ ತಮ್ಮ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಇನ್ನುಳಿದ ಎಲ್ಲ ನಿವೇಶನಗಳು ಪಾಳು ಬಿದ್ದಿವೆ. ಆಳೆತ್ತರದ ಕಸ-ಕಂಟಿಗಳು ಬೆಳೆದು ನಿಂತಿವೆ.

ಶಿರೋಳದ ಉಪ ಮಾರುಕಟ್ಟೆ ಪ್ರಾಂಗಣದಲ್ಲಿರುವ 65 ನಿವೇಶನಗಳ ಪೈಕಿ 4 ನಿವೇಶನ ಹಂಚಿಕೆ ಮಾಡಲಾಗಿದ್ದು, ಒಂದು ಮಳಿಗೆ ಮಾತ್ರ ಕಾರ್ಯಾರಂಭಗೊಂಡಿದೆ.

ಇನ್ನುಳಿದ ಎಲ್ಲ ನಿವೇಶನಗಳು ಪಾಳು ಬಿದ್ದಿವೆ. ಎರಡೂ ಎಪಿಎಂಸಿಯಲ್ಲಿ ಬೀದಿದೀಪ, ಕುಡಿಯುವ ನೀರಿನ ಸಮಸ್ಯೆ ನಿತ್ಯನಿರಂತರ ಎನ್ನುವಂತಾಗಿದೆ. ಮಳೆಗೆ ಕಾಂಪೌಂಡ್ ಬಿದ್ದು, ಗೇಟ್‌ಗಳು ಮುರಿದಿದ್ದರೂ ಯಾರೊಬ್ಬರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸುಗ್ಗಿ ಸಂದರ್ಭದಲ್ಲಿ ಎಪಿಎಂಸಿ ಪ್ರಾಂಗಣಗಳು ರೈತರಿಗೆ ಕಣವಾಗಿ ಮಾರ್ಪಡುತ್ತವೆ. ಎರಡೂ ಉಪಮಾರುಕಟ್ಟೆಗೆ ಕಾವಲುಗಾರನಿಲ್ಲದೇ ದಾರಿ ಹೋಕರು, ದನ-ಕರುಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.

ಬಹುತೇಕ ರೈತರು ರಾಶಿ ಮಾಡಿದ ಬಳಿಕ ವಿವಿಧ ತ್ಯಾಜ್ಯಗಳನ್ನು ಪ್ರಾಂಗಣದ ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ. ಕೆಲವರು ಪ್ರವೇಶ ದ್ವಾರದ ಎರಡು ಬದಿಗಳಲ್ಲಿ ತಿಪ್ಪೆಗಳನ್ನು ಹಾಕಿಕೊಂಡಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಅನೈರ್ಮಲ್ಯಕ್ಕೆ ಕಾರಣವಾಗಿದೆ.

ಸಿಬ್ಬಂದಿ ಸಂಬಳ ಪಾವತಿಗೂ ಸಂಕಷ್ಟ

ನರಗುಂದ ಎಪಿಎಂಸಿಗೆ 2019-20 ರಲ್ಲಿ ಎಲ್ಲ ವ್ಯಾಪಾರಸ್ಥರಿಂದ 2 ಕೋಟಿ 82 ಲಕ್ಷ ರೂ. ಸೆಸ್ ಸಂಗ್ರಹಗೊಂಡಿತ್ತು. ಇದರಲ್ಲಿ ಕೊಣ್ಣೂರಿನ ಕೇವಲ 10 ವ್ಯಾಪಾರಸ್ಥರಿಂದ 20 ಲಕ್ಷ ರೂ. ಸೆಸ್ ಸಂಗ್ರಹಗೊಂಡರೆ, ಶಿರೋಳದ 15 ವ್ಯಾಪಾರಸ್ಥರಿಂದ ಬರೋಬ್ಬರಿ 80 ಲಕ್ಷ ರೂ. ಸೆಸ್ ಸಂಗ್ರಹಗೊಂಡಿತ್ತು. ಆದರೀಗ 2022ರಲ್ಲಿ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ಕೇವಲ 47 ಲಕ್ಷ ರೂಪಾಯಿ ಸೆಸ್ ಸಂಗ್ರಹಗೊಂಡಿದೆ. ಹೀಗಾಗಿ ಎಪಿಎಂಸಿಗಳ ಅಭಿವೃದ್ಧಿ ಒತ್ತಟ್ಟಿಗಿರಲಿ, ಪ್ರತಿ ತಿಂಗಳು ಎಲ್ಲ ಸಿಬ್ಬಂದಿಯ ಸಂಬಳವನ್ನು ಪಾವತಿಸಲೂ ಸಾಧ್ಯವಾಗುತ್ತಿಲ್ಲ.

ವ್ಯಾಪಾರಸ್ಥರಿಂದ ರೈತರಿಗೆ ವಂಚನೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ್ದರಿಂದ ಯಾವುದೇ ವರ್ತಕರು ತಮಗೆ ಬೇಕಾದ ಕಡೆಗಳಲ್ಲಿ ಮುಕ್ತ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೆ ಎಂಬ ಆಶಾಭಾವನೆ ಸರ್ಕಾರದ್ದಾಗಿತ್ತು. ಆದರೆ, ಕೆಲವೊಂದು ಧನದಾಹಿ ವ್ಯಾಪಾರಸ್ಥರು ರೈತರ ವಿವಿಧ ಉತ್ಪನ್ನಗಳ ಖರೀದಿಯಲ್ಲಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತೂಕದಲ್ಲಿ ವ್ಯತ್ಯಾಸ ಮಾಡಿದ, ವಿವಿಧೆಡೆಯಿಂದ ಆಗಮಿಸಿದ ಕೆಲ ವರ್ತಕರು ಹೆಚ್ಚಿನ ಬೆಲೆಗೆ ರೈತರ ಉತ್ಪನ್ನ ಖರೀದಿಸಿದ ಬಳಿಕ ಹಣ ಪಾವತಿಸದೇ ಪರಾರಿಯಾಗಿರುವ ಪ್ರಕರಣಗಳು ನಡೆದಿವೆ.

ಬೆಳಗಾವಿ ಮೂಲದ ವ್ಯಾಪಾರಸ್ಥರಿಗೆ ನರಗುಂದ ತಾಲೂಕಿನ ಹಲವಾರು ರೈತರು ತಮ್ಮ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಹೋಗಿದ್ದಾರೆ. ಈ ಬಗ್ಗೆ ಎಪಿಎಂಸಿ, ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಎಪಿಎಂಸಿ ಕಾಯ್ದೆಗೆ ಮತ್ತೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು.ವಿಠ್ಠಲ ಜಾಧವ, ರೈತಸಂಘದ ತಾಲೂಕು ಅಧ್ಯಕ್ಷ ನರಗುಂದ ತಾಲೂಕಿನ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಗೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಆದರೆ, ಕಾಯ್ದೆ ತಿದ್ದುಪಡಿ ಮಾಡಿದ್ದರಿಂದ ಯಾವುದೇ ವ್ಯಾಪಾರಸ್ಥರಿಗೆ ಶಿಕ್ಷೆ ಅಥವಾ ದಂಡ ವಿಧಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಸೂಕ್ತ ಆದಾಯವಿಲ್ಲದೇ ಕೊಣ್ಣೂರ, ಶಿರೋಳ ಎಪಿಎಂಸಿ ಉಪ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ.ರಾಘವೇಂದ್ರ ಸಜ್ಜನ, ಎಪಿಎಂಸಿ ಕಾರ್ಯದರ್ಶಿ