ಮಡಿಕೇರಿ: ಮಹಿಳೆಯರು ಮನೆಯ ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದಾಗ ಮಾತ್ರ ಅವರ ಮನಸ್ಸಿನಲ್ಲಿನ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅಭಿಪ್ರಾಯಪಟ್ಟರು.
ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ನಡೆದ ಮಡಿಕೇರಿಯ ರಾಧಿಕಾ ವಿಶ್ವನಾಥ್ ಬರೆದಿರುವ ಒಲವಧಾರೆ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗೃಹಿಣಿಯೋರ್ವಳು ಮನೆಯವರ ಪಾಲಿಗೆ ಅಮ್ಮ, ಅತ್ತೆ, ಸಹೋದರಿ, ನಾದಿನಿ ಮುಂತಾದ ಸಂಬಂಧ ಮಾತ್ರ ಆಗಿರುವ ಮನಸ್ಥಿತಿಯಲ್ಲಿ ಆಕೆಯ ನಿಜವಾದ ಪ್ರತಿಭೆ ಬೆಳಕಿಗೆ ಬರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಗೃಹಿಣಿಯೋರ್ವಳು ಸಮಾಜದ ಮುಖ್ಯವಾಹಿನಿಗೆ ಬಂದು ತನ್ನ ಸುಪ್ತ ಪ್ರತಿಭೆ ಬೆಳಕಿಗೆ ತಂದಾಗ ಮಾತ್ರ ಆಕೆ ಸಾಧಕಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಹಿರಿಯ ಲೇಖಕ ಜಿ.ಟಿ.ರಾಘವೇಂದ್ರ ಮಾತನಾಡಿ, ಇಂದಿನ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಲೇಖಕರು, ಕವಿಗಳು ಹೊರಹೊಮ್ಮುತ್ತಿದ್ದಾರೆ. ಇಂಥವರಿಂದ ಸಾಹಿತ್ಯ ಕ್ಷೇತ್ರಕ್ಕೆ ಸುದೀರ್ಘ ಕಾಲ ಸ್ಮರಣೀಯವಾಗುವ ಸಾಹಿತ್ಯ ದೊರಕವಂತಾಗಲಿ ಎಂದು ಹಾರೈಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಸಾಹಿತ್ಯದ ನಿರಂತರ ಕಲಿಕೆ, ಓದಿನ ಮೂಲಕ ಬರವಣಿಗೆಯನ್ನು ಸಿದ್ಧಿಸಿಕೊಳ್ಳಲು ಸಾಧ್ಯ ಎಂದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಸಾಹಿತ್ಯ ಪರ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್, ಜಾನಪದ ಪರಿಷತ್, ಸೇರಿದಂತೆ ವಿವಿಧ ಸಾಹಿತ್ಯ ಪರ ಸಂಘಟನೆಗಳಲ್ಲಿ ನೂರಾರು ಲೇಖಕ, ಲೇಖಕಿಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದೇ ಇದಕ್ಕೆ ಕಾರಣ. ರಾಧಿಕಾ ವಿಶ್ವನಾಥ್ ತನ್ನ ಕಾವ್ಯ ಸಂಕಲನದ ಬಿಡುಗಡೆ ಸಂದರ್ಭ ಕವನ, ಗಾಯನ, ನೃತ್ಯ ಪ್ರತಿಭೆಗಳಿಗೆ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಸಾಹಿತ್ಯ-ಸಾಂಸ್ಕೃತಿಕ ಲೋಕದ ಸಂಗಮದಂತೆ ಕಾರ್ಯಕ್ರಮ ರೂಪಿಸಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಹೆಮ್ಮೆ ಪಟ್ಟರು.
ಲೇಖಕಿ ರಾಧಿಕಾ ವಿಶ್ವನಾಥ್ ಮಾತನಾಡಿ, ಮನಸ್ಸಿನ ಸಂತೋಷಕ್ಕಾಗಿ ಕವಿತೆ ಬರೆಯಲು ಪ್ರಾರಂಭಿಸಿದ ತನಗೆ ಕಾವ್ಯಗಳು ಭಾವಾನುಭೂತಿಯ ಅನಾವರಣಕ್ಕೆ ನೆರವಾದವು. ಅನೇಕರ ಪ್ರಶಂಸೆಯ ನುಡಿಗಳೇ ಪ್ರೋತ್ಸಾಹ ನೀಡುವ ಮೂಲಕ ೧೦೮ ಕವನಗಳ ಒಲವ ಧಾರೆ ಕಾವ್ಯ ಸಂಕಲನ ಪ್ರಕಟಿಸಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.
ಕಾಯಕ್ರಮದಲ್ಲಿ ಕವಿಯತ್ರಿ ರಾಧಿಕಾ ಅವರ ತಂದೆ ಅನಂತರಾಮಯ್ಯ, ಪ್ರಮುಖರಾದ ಕಷ್ಣವೇಣಿ ಪ್ರಸಾದ್ ಮುಳಿಯ, ವಿಜಯಲಕ್ಷ್ಮೀ ಚೇತನ್, ಕೆ.ಕೆ.ವಿಶ್ವನಾಥ್, ಗೌರಿ ಹಿರಿಯಣ್ಣ ಇತರರಿದ್ದರು. ಇದೇ ಸಂದರ್ಭದಲ್ಲಿ ರಾಧಿಕಾ ವಿಶ್ವನಾಥ್ ವಿರಚಿತ ಕವನಗಳನ್ನು ಆದರಿಸಿ ವಿವಿಧ ಗಾಯಕರಿಂದ ಹಾಡುಗಾರಿಕೆ, ಕಾವ್ಯಶ್ರೀ ಕಪಿಲ್ ತಂಡದಿಂದ ನೃತ್ಯವೈವಿಧ್ಯ, ಜರುಗಿತು.