ಶ್ರೀರಂಗಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಶಾಲೆ ಹಾಗೂ ಮಕ್ಕಳು ನ್ಯೂ ಆಕ್ಸ್‌ಫರ್ಡ್ ಶಾಲೆ ಮಕ್ಕಳ ನಡುವಿನ ಖೋಖೋ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸಿತು. 
ಜಿಲ್ಲೆ

ಗಮನ ಸೆಳೆದ ಹೋಬಳಿ ಮಟ್ಟದ ಕ್ರೀಡಾಕೂಟ

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಸಬಾ ಹಾಗೂ ಪಟ್ಟಣ ವ್ಯಾಪ್ತಿಯ ಪ್ರೌಢಶಾಲೆಗಳಿಗೆ ಮಂಗಳವಾರ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹೋಬಳಿಯ ವಿವಿಧ ಗ್ರಾಮಗಳು ಸೇರಿದಂತೆ ಶ್ರೀರಂಗಪಟ್ಟಣ-ಗಂಜಾಂನ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಮುರಾರ್ಜಿ ದೇಸಾಯಿ ವಸತಿ ಶಾಲೆಯ ನೂರಾರು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು.

ಕ್ರೀಡಾಂಗಣದಲ್ಲಿ ಹೆಣ್ಣು ಮತ್ತು ಗಂಡು ಕ್ರೀಡಾಪಟುಗಳು ಪ್ರತ್ಯೇಕವಾಗಿ 100, 200, 400, 800,1500 ಮೀಟರ್ ಓಟ ಹಾಗೂ ರಿಲೇ ಸ್ಪರ್ಧೆ, ಉದ್ದ ಜಿಗಿತ, ಎತ್ತರದ ಜಿಗಿತ, ಗುಂಡು, ಭರ್ಜಿ ಹಾಗೂ ಡಿಸ್ಕ್‌ಸ್ ಎಸೆತ ಸೇರಿದಂತೆ 15 ಕ್ಕೂ ಹೆಚ್ಚು ವಿವಿಧ ಅಥ್ಲೆಟಿಕ್ಸ್ ಮತ್ತು ಖೋಖೋ, ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಶೆಟಲ್ ಕಾಕ್ ಸ್ಪರ್ಧೆ ನಡೆಯಿತು. ಈ ವೇಳೆ ಸ್ಥಳದಲ್ಲಿ ಕಿಕ್ಕಿರಿದು ನೆರೆದಿದ್ದ ಸಹಪಾಠಿಗಳು, ಇತರ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದರು.

ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ದೈಹಿಕ ಶಿಕ್ಷಕರು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಈ ವೇಳೆ ಆಯ್ಕೆಗೊಳಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ದರಾಜು, ದೈಹಿಕ ಶಿಕ್ಷಕರಾದ ಶಿವಾನಂದ್, ಕೇಶವಮೂರ್ತಿ, ಕೃಷ್ಣೇಗೌಡ,ರಂಗನಾಥ್, ಸೀತಾ ರಾಮು, ಚಂದ್ರಮೌಳಿ, ಅನುಷ ಇತರರು ಕಾರ್ಯ ನಿರ್ವಹಿಸಿದರು.