ಮಡಿಕೇರಿ:
ರಾಜ್ಯದಲ್ಲಿ ಪ್ರವಾಸೋದ್ಯಮ ಗರಿಷ್ಠ ಪ್ರಮಾಣದಲ್ಲಿ ನಡೆಯುತ್ತಿರುವ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಿಗಳನ್ನು ವಂಚಿಸುವ ಹೈಟೆಕ್ ವಂಚಕರ ಜಾಲ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ರೆಸಾರ್ಟ್, ಹೋಮ್‌ಸ್ಟೇ, ಲಾಡ್ಜ್‌ಗಳ ಅಮಾಯಕ ಸಿಬ್ಬಂದಿಯನ್ನು ಈ ವಂಚಕರು ಸುಲಭವಾಗಿ ಬಲೆಗೆ ಬೀಳಿಸುತ್ತಿದ್ದಾರೆ. ಕೊಡಗು ಸೇರಿದಂತೆ ಹಲವೆಡೆ ಈಗಾಗಲೇ ಈ ಜಾಲಕ್ಕೆ ಸಿಲುಕಿ ಹಲವರು ಹಣ ಕಳೆದುಕೊಂಡಿದ್ದಾರೆ.
ಅದ್ಭುತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಕೊಡಗು ಜಗತ್ತಿನ ಪ್ರವಾಸಿತಾಣಗಳ ನಕಾಶೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಪ್ರವಾಸಕ್ಕೆ ಸೂಕ್ತ ಸ್ಥಳ ಯಾವುದು ಎನ್ನುವುರ ಬಗ್ಗೆ ಗೂಗಲ್‌ನಲ್ಲಿ ಭಾರತೀಯರು ಹುಡುಕಾಡಿದ ಟಾಪ್ ಟೆನ್ ಸ್ಥಳಗಳ ಪೈಕಿ ಕೊಡಗು ೭ನೇ ಸ್ಥಾನ ಪಡೆದುಕೊಂಡಿದೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್ ಎಂದು ಕರೆಯಲಾಗುತ್ತದೆ. ದಕ್ಷಿಣದ ಕಾಶ್ಮೀರ ಎನ್ನುವ ಹೆಗ್ಗಳಿಯೂ ಇದೆ. ಪಶ್ಚಿಮಘಟ್ಟದ ಸರಗಿನಲ್ಲಿ ಮಲೆನಾಡಿನ ಮಡಿಲಲ್ಲಿರುವ ಇರುವ ಈ ಪುಟ್ಟ ಜಿಲ್ಲೆ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕರಾವಳಿ ಪ್ರವಾಸೋದ್ಯಮ ಉತ್ತುಂಗದಲ್ಲಿದ್ದ ಸಮಯದಲ್ಲಿ ೨೦೦೪ರಲ್ಲಿ ದೇಶದ ಕರಾವಳಿಗೆ ಸುನಾಮಿ ಅಪ್ಪಳಿಸಿದ ನಂತರ ಪ್ರವಾಸಿಗರ ಆದ್ಯತೆಯ ಕ್ಷೇತ್ರ ಬದಲಾಯಿತು. ಪಶ್ಚಿಮಘಟ್ಟದ ಗಿರಿ ಶ್ರೇಣಿಗಳ ಕಡೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಹೀಗೆ ಕಳೆದ ೨ ದಶಕಗಳಿಂದ ಈಚೆಗೆ ಕೊಡಗಿನಲ್ಲಿ ವಾಣಿಜ್ಯಿಕವಾಗಿ ಶುರುವಾದ ಪ್ರವಾಸೋದ್ಯಮ ಈಗ ಒಂದು ಹಂತಕ್ಕೆ ತಲುಪಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗಿದೆ.
೨೦೧೮ರ ನಂತರ ಸತತ ಮೂರು ವರ್ಷಗಳ ಕಾಲ ಜಿಲ್ಲೆಯನ್ನು ಕಾಡಿದ್ದ ಪ್ರಾಕೃತಿಕ ವಿಕೋಪ, ಅತಿವೃಷ್ಠಿ ಹಾಗೂ ನಂತರ ಜಗತ್ತಿಗೆ ಕಂಟಕವಾಗಿದ್ದ ಕೊರೊನಾ ಕೊಡಗಿನ ಪ್ರವಾಸೋದ್ಯಮಕ್ಕೆ ಸ್ವಲ್ಪ ಹಿನ್ನಡೆ ಉಂಟುಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಚೇತರಿಕೆ ಕಂಡಿದ್ದು ಕೊಡಗು ಮತ್ತೆ ಪುಟಿದೆದ್ದಿದೆ. ಕಳೆದ ೨ ವರ್ಷದಿಂದ ಈಚೆಗೆ ಪ್ರವಾಸಿಗರ ದಟ್ಟಣೆ ಪುನಃ ಮೊದಲಿನಂತೆ ಹೆಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಪ್ರವಾಸಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ನಡೆದಿದೆ. ಮಾರ್ಚ್‌ನಿಂದ ಮೇ ತನಕದ ಪ್ರವಾಸಿ ಸೀಸನ್, ಜೂನ್‌ನಿಂದ ಆಗಸ್ಟ್ ತನಕ ಮಳೆಗಾಲದ ಪ್ರವಾಸೋದ್ಯಮ, ಅಕ್ಟೋಬರ್‌ನಲ್ಲಿ ದಸರಾ ರಜೆ, ಡಿಸೆಂಬರ್ ಮತ್ತು ಜನವರಿಯಲ್ಲಿ ವರ್ಷಾಂತ್ಯ ಮತ್ತು ಹೊಸ ವರ್ಷಾರಂಭದ ಸಂಭ್ರಮ.. ಹೀಗೆ ಒಂದಿಲ್ಲೊಂದು ಕಾರಣಕ್ಕೆ ಕೊಡಗನಲ್ಲಿ ಪ್ರವಾಸಿಗರ ಕಲರವ ಇದ್ದೇ ಇರುತ್ತದೆ.
ಜಿಲ್ಲೆಯ ಪ್ರಾಕೃತಿಕ ಸೊಬಗಿನ ಆಕರ್ಷಣೆ, ಮೋಡಿ ಮಾಡುವ ಪರಿಸರ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸೆಳೆಯಲು ಕಾರಣವಾಗಿದೆ. ದೇಶದ ಪ್ರಮುಖ ಗಿರಿಧಾಮಗಳ ಪಟ್ಟಿಯಲ್ಲೂ ಕೊಡಗು ಸ್ಥಾನ ಪಡೆದುಕೊಂಡಿದೆ. ಇಲ್ಲಿಯ ಕಾಫಿ ತೋಟ, ಜಲಪಾತಗಳು, ಹಸಿರು ತುಂಬಿದ ದಟ್ಟ ಕಾಡು, ವನ್ಯಜೀವಿ ತಾಣಗಳಿಗೆ ಜಿಲ್ಲೆ ಹೆಸರಾಗಿದೆ. ಇಲ್ಲಿಯ ವಾತಾವರಣ ಶಾಂತಿ ಮತ್ತು ತಾಜಾತನವನ್ನು ಪ್ರವಾಸಿಗರಲ್ಲಿ ತುಂಬುತ್ತದೆ ಎನ್ನುವ ನಂಬಿಕೆಯೂ ಇದೆ. ಟ್ರಕ್ಕಿಂಗ್, ರ‌್ಯಾಫ್ಟಿಂಗ್, ಕ್ಯಾಂಪಿಂಗ್‌ನಂತಹ ಸಾಹಸ ಕ್ರೀಡೆಗಳನ್ನೂ ಆನಂದಿಸಬಹುದು. ಮಡಿಕೇರಿ ಕೋಟೆ, ಅಬ್ಬಿಫಾಲ್ಸ್, ರಾಜಾ ಸೀಟ್, ನಾಗರಹೊಳೆ ರಾಷ್ಟ್ರೀಯ ಉದ್ಯಾನ, ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರ ಪ್ರಮುಖ ಆಕರ್ಷಣೆಗಳಾಗಿದೆ.
ಹೀಗೆ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಸತಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರವಾಸೋದ್ಯಮಿಗಳು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಐಷಾರಾಮಿ ರೆಸಾರ್ಟ್‌ಗಳು ಕಾರ್ಯಾಚರಿಸುತ್ತಿವೆ. ಪ್ರತಿ ಊರಿನಲ್ಲೂ ದೊಡ್ಡ ಸಂಖ್ಯೆಯಲ್ಲಿ ಹೋಮ್‌ಸ್ಟೇಗಳಿವೆ. ಲಾಡ್ಜ್‌ಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ವಾರಾಂತ್ಯದ ದಿನಗಳು ಮತ್ತು ರಜಾದಿನಗಳಲ್ಲಿ ಜಿಲ್ಲೆಯ ಎಲ್ಲಾ ವಸತಿ ವ್ಯವಸ್ಥೆಗಳೂ ಭರ್ತಿ ಆಗಿರುತ್ತವೆ. ಹಾಗಾಗಿ ಇಂಥ ಸಂದರ್ಭದಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡು ಬಂದರಷ್ಟೇ ಹೆಚ್ಚು ಪರದಾಟ ಇಲ್ಲದೆ ವಾಸ್ತವ್ಯಕ್ಕೆ ಅವಕಾಶ ಸಿಗುತ್ತದೆ. ಇದನ್ನೇ ಈಗ ಹೈಟೆಕ್ ವಂಚಕರು ತಮ್ಮ ಕುಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ತಮ್ಮಲ್ಲಿ ಕೊಠಡಿ ಬುಕ್ಕಿಂಗ್ ಮಾಡಿರುವುದಾಗಿ ಹೊಟೇಲ್, ಹೋಮ್‌ಸ್ಟೇ ಅಥವಾ ರೆಸಾರ್ಟ್ ಸಿಬ್ಬಂದಿಗೆ ಕರೆ ಮಾಡುವ ವಂಚಕರು ನಿಗದಿಗಿಂತ ಹೆಚ್ಚುವರಿ ಮೊತ್ತವನ್ನು ಆಕಸ್ಮಿಕವಾಗಿ ಪಾವತಿ ಮಾಡಿರುವುದಾಗಿ ಹೇಳಿ ಅದಕ್ಕೆ ಪುರಾವೆಯಾಗಿ ನಕಲಿ ಸ್ಕ್ರೀನ್ ಶಾಟ್‌ಗಳನ್ನೂ ಕಳುಹಿಸುತ್ತಾರೆ. ಆದರೆ ವಾಸ್ತವದಲ್ಲಿ ಯಾವುದೇ ಪಾವತಿ ಆಗಿರುವುದಿಲ್ಲ. ಸಾಮಾನ್ಯವಾಗಿ ಮುಂಗಡ ಬುಕ್ಕಿಂಗ್‌ಗೆ ೩ ಸಾವಿರ ರೂ. ಇದ್ದರೆ ೩೦ ಸಾವಿರ ರೂ. ಪಾವತಿಸಿರುವುದಾಗಿ ಸ್ಕ್ರೀನ್ ಶಾಟ್ ಕಳುಹಿಸುವ ವಂಚಕರು ಹೆಚ್ಚವರಿ ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಹೀಗೆ ಕರೆ ಮಾಡುವವರ ಮನವಿಗೆ ಕರಗುವ ಸಿಬ್ಬಂದಿ ಹಣವನ್ನು ವಂಚಕರಿಗೆ ಪಾವತಿಸಿ ಕೈ ಸುಟ್ಟುಕೊಂಡಿದ್ದಾರೆ.
ಈ ವಿಷಯ ಈಗ ಪ್ರವಾಸೋದ್ಯಮಿಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಿ ಇನ್ನು ಮುಂದೆ ಈ ವಂಚಕರ ಜಾಲಕ್ಕೆ ಬಲಿಯಾಗದಂತೆ ತಮ್ಮ ತಮ್ಮ ಸಿಬ್ಬಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆ ಗಮನಕ್ಕೂ ವಿಷಯ ತಲುಪಿದ್ದು, ಈತನಕ ಯಾವುದೇ ದೂರು ದಾಖಲಾಗಿಲ್ಲ. ಆದರೂ ಆನ್‌ಲೈನ್ ಮೂಲಕ ನಡೆಯುವ ಹೈಟೆಕ್ ವಂಚನೆಗಳ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸಲಹೆ ಮಾಡಿದೆ.
ನಮ್ಮ ಹೋಮ್‌ಸ್ಟೇಗೆ ಕರೆ ಮಾಡಿದ ಮಹಿಳೆಯೊಬ್ಬರು ಅವರ ಸಂಸ್ಥೆಯಿಂದ ಕೊಡಗಿಗೆ ೧೦ ಸಿಬ್ಬಂದಿ ಪ್ರವಾಸ ಬರುತ್ತಿದ್ದು, ಆನ್‌ಲೈನ್ ಮೂಲಕ ಕೊಠಡಿ ಕಾಯ್ದಿರಿಸುವುದಾಗಿ ತಿಳಿಸಿದರು. ಇದಕ್ಕಾಗಿ ನಿಗದಿತ ಮೊತ್ತ ೩ ಸಾವಿರ ರೂ.ಗೆ ಬದಲಾಗಿ ೩೦ ಸಾವಿರ ರೂ. ಪಾವತಿ ಮಾಡಿರುವುದಾಗಿ ತಿಳಿಸಿ ಸಂಬಂಧಿಸಿದ ವ್ಯವಹಾರದ ಸ್ಕ್ರೀನ್‌ಶಾಟ್ ಕೂಡ ಕಳಿಸಿದರು. ಹೆಚ್ಚುವರಿ ಹಣ ೨೭ ಸಾವಿರ ರೂ. ವಾಪಸ್ ಕಳಿಸುವಂತೆ ವಿನಂತಿ ಮಾಡಿಕೊಂಡರು. ಆಗ ನಮ್ಮ ಸಿಬ್ಬಂದಿ ನೀವು ಇಲ್ಲಿಗೆ ಬಂದಾಗ ಕೊಡುವುದಾಗಿ ಹೇಳಿದರು. ಆದರೆ ಕರೆ ಮಾಡಿದಾಕೆ ಒಪ್ಪದೇ ನನ್ನ ಕೆಲಸ ಹೋಗಿಬಿಡುತ್ತದೆ ದಯವಿಟ್ಟು ವಾಪಸ್ ಕಳಿಸಿ ಎಂದು ನಯವಾಗಿ ವಿನಂತಿ ಮಾಡಿಕೊಂಡಾಗ ನಮ್ಮ ಸಿಬ್ಬಂದಿ ಹಣ ವಾಪಸ್ ಮಾಡಿಬಿಟ್ಟಿದ್ದಾರೆ. ನಂತರ ನಮ್ಮ ಖಾತೆ ಪರಿಶೀಲಿಸುವಾಗ ಅವರ ಕಡೆಯಿಂದ ನಮಗೆ ಯಾವುದೇ ಹಣ ಬಂದಿರಲಿಲ್ಲ.
ಹೆಸರು ಹೆಳಲು ಇಚ್ಛಿಸದ ಹೋಮ್ ಸ್ಟೇ ಮಾಲೀಕ, ಮಡಿಕೇರಿ
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮಾಹಿತಿಯೂ ಎಲ್ಲಾ ಕಡೆಯಲ್ಲೂ ಲಭ್ಯ ಇರುವುದರಿಂದ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಆನ್‌ಲೈನ್ ವಂಚಕರು ಅತ್ಯಂತ ಚಾಣಾಕ್ಷರಾಗಿರುತ್ತಾರೆ. ವಂಚನೆಗಾಗಿ ಪ್ರತಿದಿನವೂ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಪ್ರವಾಸೋದ್ಯಮಿಗಳಿಗೆ ಈಗ ನಡೆದಿರುವ ವಂಚನೆಯೂ ಇದರ ಒಮದು ಭಾಗ. ಇದರಿಂದ ತಪ್ಪಿಸಿಕೊಳ್ಳಲು ಜನರು ಜಾಗೃತರಾಗಬೇಕಾಗುತ್ತದೆ. ಪೊಲೀಸ್ ಇಲಾಖೆ ತನ್ನ ಪರಿಮಿತಿಯಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಬ್ಯಾಂಕ್‌ಗಳು, ಟೆಲಿಫೋನ್ ಆಪರೇಟಿಂಗ್ ಸಂಸ್ಥೆಗಳೂ ಗರಿಷ್ಠ ಭದ್ರತೆಯ ಭರವಸೆ ಗ್ರಾಹಕರಿಗೆ ನೀಡಬೇಕಾಗುತ್ತದೆ.
ಕೆ. ರಾಮರಾಜನ್, ಕೊಡಗು ಎಸ್‌ಪಿ.