ಜಿಲ್ಲೆ

ವ್ಯಾಜ್ಯದಲ್ಲಿ ಸೋತಿದ್ದಕ್ಕೆ ವಕೀಲರ ವಿರುದ್ಧ ಕೇಸ್​ ದಾಖಲಿಸಿದ್ದ ವಿವಿಗೆ ಹೈಕೋರ್ಟ್​ ತರಾಟೆ! ವಕೀಲರ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು: ನ್ಯಾಯಾಲಯದ ವ್ಯಾಜ್ಯದಲ್ಲಿ ಸೋತಿದ್ದಕ್ಕೆ ತನ್ನದೇ ವಕೀಲರ ಸಮಿತಿಯಲ್ಲಿದ್ದ ವಕೀಲರೊಬ್ಬರ ವಿರುದ್ಧ ವಂಚನೆಯ ಆರೋಪದಲ್ಲಿ ಕ್ರಿಮಿನಲ್​ ಮೊಕದ್ದಮೆ ಹೂಡಿದ್ದ ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್​ಜಿಯುಎಚ್​ಎಸ್​) ಮತ್ತದರ ರಿಜಿಸ್ಟ್ರಾರ್​ಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್​, ವಕೀಲರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಧಾರವಾಡದಲ್ಲಿ 15 ವರ್ಷಗಳಿಂದ ಆರ್​ಜಿಯುಎಚ್​ಎಸ್​ ಪರ ವಾದ ಮಂಡಿಸುತ್ತಿದ್ದ ವಕೀಲ ಶಿವಕುಮಾರ್​ ಎಸ್​. ಬಾಡವಾಡಗಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧದ ಎಫ್​ಐಆರ್​ ರದ್ದು ಪಡಿಸಿದೆ.

ಜತೆಗೆ, ಇಂತಹ ದೂರು ದಾಖಲಿಸುವಾಗ ಎಚ್ಚರಿಕೆ ವಹಿಸುವಂತೆ ಆರ್​ಜಿಯುಎಚ್​ಎಸ್​ ಮತ್ತದರ ರಿಜಿಸ್ಟ್ರಾರ್​ಗೆ ತಾಕೀತು ಮಾಡಿರುವ ನ್ಯಾಯಪೀಠ, ಇಂಥ ಘಟನೆ ಮರುಕಳಿಸಿದರೆ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

ಪ್ರಕರಣವೇನು?: ಸ್ನಾತಕೋತ್ತರ ಪ್ರವೇಶ ಪರೀಕ್ಷೆ-2010ರ ಅವ್ಯವಹಾರ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ ಅರ್ಜಿಗಳು ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಂದಾಗ, ಅರ್ಜಿದಾರ ಶಿವಕುಮಾರ್​ ನ್ಯಾಯಾಲಯದಲ್ಲಿ ವಿವಿಯನ್ನು ಪ್ರತಿನಿಧಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ವಿವಿ ಪರವಾಗಿ ನೋಟಿಸ್​ ಸಹ ಸ್ವೀಕರಿಸಿದ್ದರು. ಅವ್ಯವಹಾರ ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಇದೇ ರೀತಿಯ ಅರ್ಜಿಯಲ್ಲಿ ಹಿಂದೆ ನೀಡಲಾದ ಆದೇಶದ ಆಧಾರದಲ್ಲಿ ಹೈಕೋರ್ಟ್​ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು.

ನ್ಯಾಯಾಲಯದ ಆದೇಶವನ್ನು ಶಿವಕುಮಾರ್​ ವಿವಿಗೆ ತಿಳಿಸಿದ್ದರು. 2022ರ ಜು.29ರಂದು ವಕೀಲರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹೂಡಿದ್ದ ವಿವಿ, ಆರೋಪಿಗಳ ಜತೆ ಶಾಮಿಲಾಗಿ ಅವರ ಅರ್ಜಿಗಳನ್ನು ವಿಲೇವಾರಿ ಮಾಡಲು ಶಿವಕುಮಾರ್​ ಸಹಾಯ ಮಾಡಿದ್ದಾರೆಂದು ಆರೋಪಿಸಿತ್ತು. ಅಲ್ಲದೆ, ಅವರನ್ನು ವಿಶ್ವವಿದ್ಯಾಲಯದ ವಕೀಲರ ಸಮಿತಿಯಿಂದ ತೆಗೆದು ಹಾಕಲಾಗಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಹೈಕೋರ್ಟ್​ ಹೇಳಿದ್ದೇನು?: ವ್ಯಾಜ್ಯದಲ್ಲಿ ಸೋಲುಂಟಾದ ಮಾತ್ರಕ್ಕೆ ವಕೀಲರು ಎದುರು ಪಕ್ಷದವರೊಂದಿಗೆ ಶಾಮೀಲಾಗಿದ್ದಾರೆ ಹಾಗೂ ಅವರಿಗೆ ಸಹಕರಿಸಿದ್ದಾರೆ ಎಂದು ಆರೋಪ ಮಾಡುವುದು ಸರಿಯಲ್ಲ. ಅಂತಹ ಅಧಿಕಾರ ವಿವಿಗೆ ಇಲ್ಲ. ನ್ಯಾಯಾಲಯದ ಮುಂದೆ ವಿವಿ ಪ್ರತಿನಿಧಿಸುವ ಅರ್ಜಿದಾರರ ಕ್ರಮ ಮತ್ತು ಹಿಂದಿನ ತೀರ್ಪು ಪರಿಗಣಿಸಿ ಅರ್ಜಿಗಳನ್ನು ನ್ಯಾಯಾಲಯ ಮಾನ್ಯ ಮಾಡಿದರೆ, ಅದು ಕ್ರಿಮಿನಲ್​ ಪ್ರಕರಣ ದಾಖಲಿಸಲು ಕಾರಣವಾಗುವುದಿಲ್ಲ. ಅರ್ಜಿದಾರರ ವಿರುದ್ಧ ಹೊರಿಸಲಾದ ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ. ಆರ್​ಜಿಯುಎಚ್​ಎಸ್​ನ ದೂರು ದುರುದ್ದೇಶದಿಂದ ಕೂಡಿದೆ, ಆರೋಪಗಳು ಅಸಂಬದ್ಧವಾಗಿವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯ ಪೀಠ, ಅರ್ಜಿದಾರರ ವಿರುದ್ಧ ವಿವಿ ದಾಖಲಿಸಿದ್ದ ಪ್ರಕರಣ ರದ್ದು ಪಡಿಸಿದೆ.