ಜಿಲ್ಲೆ

ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಬೆಂಗಳೂರು: ಅಪ್ರಾಪ್ತ ಸಂತ್ರಸ್ತೆಯೇ ಆರೋಪಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಒಪ್ಪಿಕೊಂಡ ಹಾಗೂ ಪ್ರೌಢಾವಸ್ಥೆ ತಲುಪಿದ ಬಳಿಕ ಆತನನ್ನೇ ಮದುವೆ ಆಗಿರುವುದನ್ನು ಪರಿಗಣಿಸಿದ ಹೈಕೋರ್ಟ್​, ಆರೋಪಿಯ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ರದ್ದುಪಡಿಸಿದೆ.

ಹದಿನೇಳು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಆರೋಪದಲ್ಲಿ ಪೊಲೀಸರು ದಾಖಲಿಸಿರುವ ದೋಷಾರೋಪ ಪಟ್ಟಿ ಹಾಗೂ ಪ್ರಕರಣ ಕುರಿತ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ 23 ವರ್ಷದ ಆರೋಪಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್​ ಹೇಳಿದ್ದೇನು?: ಆರೋಪಿಯನ್ನು ಪ್ರೀತಿಸುತ್ತಿದ್ದ ತಾನು ಸಮ್ಮತಿಯಿಂದಲೇ ಆತನೊಂದಿಗೆ ಲೈಂಗಿಕ ಸಂಪರ್ಕ ಬೆಳಸಿರುವುದಾಗಿ ಸಂತ್ರಸ್ತೆಯೇ ವಿಚಾರಣಾ ನ್ಯಾಯಾಲಯದ ಮುಂದೆ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ. ಅದನ್ನು ಆಧರಿಸಿಯೇ ವಿಚಾರಣಾ ನ್ಯಾಯಾಲಯ ಆರೋಪಿಗೆ ಈ ಹಿಂದೆ ಜಾಮೀನು ನೀಡಿದೆ. 2020ರ ಮಾರ್ಚ್​ನಲ್ಲಿ ಸಂತ್ರಸ್ತೆಗೆ 18 ವರ್ಷ ತುಂಬಿದ್ದು, ಅಕ್ಟೋಬರ್​ನಲ್ಲಿ ಆರೋಪಿಯನ್ನು ಮದುವೆಯಾಗಿದ್ದಾರೆ. ಅದೇ ದಿನ ಅವರ ಮದುವೆಯೂ ಕಾನೂನು ಪ್ರಕಾರ ನೋಂದಣಿಯಾಗಿದೆ. 2021ರ ಡಿಸೆಂಬರ್​ನಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ಸದ್ಯ ಆಕೆ ಆರೋಪಿಯೊಂದಿಗೇ ವಾಸವಿದ್ದಾರೆ. ಆದ್ದರಿಂದ, ಕ್ರಿಮಿನಲ್​ ಪ್ರಕರಣವನ್ನು ಮುಂದುವರಿಸಿವುದು ಅರ್ಥಹೀನ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್​, ಅರ್ಜಿದಾರನ ವಿರುದ್ಧದ ಅಪಹರಣ, ಅತ್ಯಾಚಾರ ಮತ್ತು ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಆರೋಪ ಪಟ್ಟಿ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?: ಮಗಳು ನಾಪತ್ತೆಯಾಗಿರುವ ಬಗ್ಗೆ ಸಂತ್ರಸ್ತೆಯ ತಂದೆ 2019ರ ಮಾರ್ಚ್​ನಲ್ಲಿ ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರನ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪ ಹೊರಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಮಧ್ಯೆ 18 ವರ್ಷ ವಯಸ್ಸು ಆಗುತ್ತಿದ್ದಂತೆ ಸಂತ್ರಸ್ತೆ ಆರೋಪಿಯನ್ನೇ ಮದುವೆಯಾಗಿದ್ದಳು. ಇದರಿಂದ, ಪ್ರಕರಣ ರದ್ದುಪಡಿಸುವಂತೆ ಕೋರಿ 2022ರ ಜುಲೈನಲ್ಲಿ ಆರೋಪಿ ಹೈಕೋರ್ಟ್​ ಮೆಟ್ಟಿಲೇರಿದ್ದ.