ಎಚ್.ಡಿ.ಕೋಟೆ: ಆರೋಗ್ಯವಂತ ಮಹಿಳೆ, ಒಂದು ಸಶಕ್ತ ಕುಟುಂಬಕ್ಕೆ ಮಾದರಿ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಸ್ಥ ನಾರಿ, ಸಶಕ್ತ ಪರಿವಾರ ಎಂಬುದು ಭಾರತದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಆರೋಗ್ಯದ ಮೇಲೆ ಗಮನಹರಿಸುವ ಒಂದು ಅಭಿಯಾನವಾಗಿದೆ. ಇದನ್ನು 2025ರ ಸೆಪ್ಟೆಂಬರ್ 17ರಂದು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ಈ ಅಭಿಯಾನದ ಉದ್ದೇಶ ಮಧುಮೇಹ, ಕ್ಯಾನ್ಸರ್‌ರಂತಹ ವಿವಿಧ ಕಾಯಿಲೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚಲು ಆರೋಗ್ಯ ಶಿಬಿರಗಳನ್ನು ನಡೆಸುವುದು, ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು. ಈ ಮೂಲಕ ಬಲಿಷ್ಠ ಕುಟುಂಬಗಳು ಹಾಗೂ ಸಮಾಜವನ್ನು ನಿರ್ಮಿಸುವುದು ಎಂದು ತಿಳಿಸಿದರು.
ಅಭಿಯಾನ ಪ್ರಾರಂಭವಾದಾಗಿನಿಂದ ದೇಶಾದ್ಯಂತ ದೊಡ್ಡ ಸಂಖ್ಯೆಯ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಲಕ್ಷಾಂತರ ನಾಗರಿಕರು ಈ ಅಭಿಯಾನದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಾಯಕ ಸಮಾಜದ ಮುಖಂಡರಾದ ಶಂಭುಲಿಂಗ ನಾಯಕ, ಕೃಷ್ಣ ನಾಯ್ಕ, ಪುರದ ಕಟ್ಟೆ ಬಸವರಾಜು, ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ, ರಾಜು, ಸಿದ್ದರಾಮು, ವನಸಿರಿ ಉಮೇಶ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಇದ್ದರು.