ಜಿಲ್ಲೆ

ಬೌದ್ಧ ಭಾರತ ನಿರ್ಮಾಣದಿಂದ ಸ್ವಸ್ಥ ಸಮಾಜ ಸಾಧ್ಯ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ

ಮೈಸೂರು: ಬೌದ್ಧ ಭಾರತ ನಿರ್ಮಾಣದಿಂದ ಸ್ವಸ್ಥ ಸಮಾಜ, ಅಸಮಾನತೆ ಹೋಗಲಾಡಿಸಲು ಸಾಧ್ಯ. ಅದಕ್ಕಾಗಿ ಧರ್ಮ ಪಾಲನೆ ಅಗತ್ಯ ಎಂದು ಕೇಂದ್ರ ಸಾಹಿತ್ಯ ಆಕಾಡಮಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ, ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಧಮ್ಮ ಪಯಣದ ಹಾದಿಯಲ್ಲಿ ಬುದ್ಧಂ ನಮಾಮಿ, ಬೋಧಿಯ ಮಡಿಲಲ್ಲಿ ಮಕ್ಕಳ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ಸಮಾನರು, ಯಾವುದೇ ವರ್ಣಾಶ್ರಮ, ಮೇಲು ಕೀಳು ಎನ್ನುವ ಭಾವನೆ ಇಲ್ಲ. ಶಾಂತಿ, ಸಹಬಾಳ್ವೆಯಿಂದ ಎಲ್ಲರೂ ಬಾಳಬೇಕು ಎನ್ನುವ ಸಂದೇಶವನ್ನು ಸಾರಿದ ಬುದ್ಧ ದೇಶವನ್ನು ಬೌದ್ಧ ಭಾರತವನ್ನಾಗಿಸಿದ್ದರು. ಆದರೆ ಬಳಿಕ ವರ್ಣಾಶ್ರಮ ಪೋಷಿಸುವವರು, ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಬೌದ್ಧ ಧರ್ಮ ಇಂದು ಪರಕೀಯ ಧರ್ಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶೂದ್ರರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವುದೇ ಧರ್ಮ ಎಂದುಕೊಂಡಿದ್ದಾರೆ. ಆದರೆ ನಿಜವಾಗಿ ಧರ್ಮಪಾಲನೆ ಅಗುತ್ತಿಲ್ಲ. ಹಿಂದು ಧರ್ಮದಲ್ಲಿ ಕೇವಲ ದೇವರ ಆರಾಧನೆ ಇದೆಯೇ ವಿನಾ, ವ್ಯಕ್ತಿತ್ವ ರೂಪಿಸುವ, ಎಲ್ಲರನ್ನೂ ಸಮಾನ ಎಂದು ಕಾಣುವ ಸಂದೇಶ ಇಲ್ಲ. ಆದರೆ ಬೌದ್ಧ ಧರ್ಮದಲ್ಲಿ ಇಂತಹ ಎಲ್ಲ ಸಂದೇಶದ ಜತೆಗೆ ಶಾಂತಿ ಮಂತ್ರ ಇದೆ. ಹಾಗಾಗಿ ಶೂದ್ರರು ಮೊದಲು ಮನೆಯಲ್ಲಿರುವ ದೇವರುಗಳನ್ನು ಬಿಟ್ಟು, ಬುದ್ಧವಿಗ್ರಹ ಇಟ್ಟು ಪೂಜಿಸಿ ಎಂದು ಕೋರಿದರು.

ಬುದ್ಧನ ಅನುಯಾಯಿಗಳು ಪೂಜೆ ಮಾತ್ರ ಮಾಡದೆ, ಬುದ್ಧನ ಸಂದೇಶ, ಪಂಚಶೀಲ ತತ್ವಗಳನ್ನು ಪಾಲಿಸಬೇಕು. ಇಂತಹ ಕಾರ್ಯ ಈಗ ದೇಶದ ಎಲ್ಲೆಡೆ ನಿಧಾನವಾಗಿ ಅಗುತ್ತಿದ್ದು, ಮುಂದಿನ 10-15 ವರ್ಷದಲ್ಲಿ ಬೌದ್ಧಧರ್ಮ ಪಾಲನೆ ಹೆಚ್ಚಾಗುತ್ತದೆ. ಭಾರತದಲ್ಲಿರುವ ದಲಿತರು, ಹಿಂದುಳಿದ ವರ್ಗದವರು ಬದಲಾವಣೆಯಾದರೂ ಸಹ ಬೌದ್ಧ ಭಾರತ ಎನಿಸಿಕೊಳ್ಳಲಿದೆ ಎಂದರು.

ಬ್ರಾಹ್ಮಣರಿಗೆ ಸಂಸ್ಕೃತ ಹೇಗೆ ಶ್ರೇಷ್ಠವೋ ಹಾಗೆಯೇ ನಾವು ಪಾಲಿಯ ಮಂತ್ರವನ್ನು ಪಠಿಸಬೇಕು. ಪಾಲಿಯ ಮಂತ್ರವನ್ನು ಪಠಿಸುವುದರಿಂದ ಭಾಷೆಯಲ್ಲಿ ಶುದ್ಧತೆ ಕಾಣಬಹುದು. ಹಿಂದೂ ಧರ್ಮ, ಹಿಂದೂ ದೇವತೆಗಳ ಮೂಲಕ ಒಳ್ಳೆಯದನ್ನು ಮಾಡಿಸಬೇಕೆಂಬ ಭಯವನ್ನು ಹುಟ್ಟಿಸುತ್ತದೆ. ಅದರ ಜತೆಯಲ್ಲಿಯೇ ಕೆಟ್ಟದನ್ನು ಮಾಡಿ ಕ್ಷಮಾಪಣೆ ಕೇಳುವ ಸ್ಥಿತಿಯನ್ನು ಹುಟ್ಟಿಸಿದೆ. ಆದರೆ ಬೌದ್ಧ ಧರ್ಮದಲ್ಲಿ ಸಂದೇಶ ಸಾರಿ, ಶಾಂತಿ, ಸಹಭಾಳ್ವೆ ತಿಳಿಸುತ್ತದೆ ಎಂದು ಹೇಳಿದರು.

ನಮಗೆ ನಿಜವಾದ ಧರ್ಮವೆಂದರೆ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ ಬೌದ್ಧ ಧರ್ಮ. ಮಕ್ಕಳಿಗೆ ಧಮ್ಮ ಪದದ ಗಾಥೆಗಳನ್ನು ಓದಿಸಬೇಕು. ಮಕ್ಕಳಿಗೆ ಧಮ್ಮ ಎನ್ನುವ ಧರ್ಮಗ್ರಂಥ ಕಲಿಸಬೇಕು. ಇದರಲ್ಲಿರುವ ತ್ರಿಪಿಟಕಗಳಲ್ಲಿ ಅಡಕವಾಗಿರುವ ನುಡಿಮುತ್ತುಗಳ ಬಗ್ಗೆ ಪಾಲಿ ಭಾಷೆಯಲ್ಲಿ ಓದಿಸಬೇಕು ಎಂದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಗ್ರಾಮೀಣ ಭಾಗಕ್ಕೆ ಧಮ್ಮ ಪಯಣದ ಮೂಲಕ ಧಮ್ಮ ದೀಪವನ್ನು ಹಚ್ಚುವ ಪ್ರಯತ್ನವಾಗುತ್ತಿದೆ. ಇದು ನಮ್ಮೇಲ್ಲರ ಕರ್ತವ್ಯ. ಈ ಧಮ್ಮವು ಪ್ರಸ್ತುತ ಕಾಲಘಟದಲ್ಲಿ ಭಾರತ ದೇಶಕ್ಕೆ ಅತ್ಯವ್ಯಶಕವಾಗಿದೆ. ಅಂಬೇಡ್ಕರ್ ಅವರು ಈ ಕಾರ್ಯಕ್ರಮದ ಮೂಲಕ ಬುದ್ಧರ ಹಾಗೂ ಅವರ ಚಿಂತನೆಗಳು ಈ ನಾಡಿನಲ್ಲಿ ಇತ್ತು ಎಂಬ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ದಸಂಸ ಹೋರಾಟಗಾರ ಬೆಟ್ಟಯ್ಯ ಕೋಟೆ ಮಾತನಾಡಿ, ಕುಗ್ರಾಮ, ಹಾಡಿ ಸೇರಿದಂತೆ ಕೇರಿಗಳಲ್ಲಿ ಅನ್ಯಧರ್ಮದವರು ತಮ್ಮ ಧರ್ಮವನ್ನು ಭಿತ್ತಿ ಮತಾಂತರಗೊಳ್ಳುವಂತೆ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ಹುಟ್ಟಿ ಮೂಲ ಧರ್ಮವಾಗಿರುವ ಬೌದ್ಧ ಧರ್ಮವನ್ನು ನಾವು ಜನರಿಗೆ ಮುಟ್ಟಿಸುವಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಯ, ಸಂದರ್ಭಗಳಿಗೆ ಅನುಗುಣವಾಗಿ ಅಂಬೇಡ್ಕರ್, ಬುದ್ಧನ ಗುಣಗಾನ ಮಾಡದೆ, ಎಲ್ಲರಿಗೂ ನಿರಂತರವಾಗಿ ತಲುಪಿಸುವ ಕಾರ್ಯ ಮಾಡಬೇಕು. ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.

ಧರ್ಮ ಗುರು ಸುಗತಪಾಲ ಭಂತೇಜಿ, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್ ಮಾತನಾಡಿದರು.

ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳು, ಯುವ ಬರಹಗಾರರು, ಗಾಯಕರು, ದಸಂಸ ಹೋರಾಟಗಾರರನ್ನು ಗೌರವಿಸಲಾಯಿತು. ಬುದ್ಧ ಬೆಳಕು ನಾಟಕ ಪ್ರದರ್ಶನ, ಸಂವಾದ ಆಯೋಜಿಸಲಾಗಿತ್ತು.