ಸೋಮವಾರಪೇಟೆ: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಬುಧವಾರ ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಅಂಗನವಾಡಿ ಕಾರ್ಯಕರ್ತರು ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಆರೋಗ್ಯವಂತ ಮಗು ದೇಶದ ಸಂಪತ್ತು. ಮಗು ಆರೋಗ್ಯವಾಗಿರಬೇಕಾದರೆ ತಾಯಿ ಕೂಡ ಪೌಷ್ಟಿಕ ಆಹಾರ ಸೇವಿಸಲೇಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಸುರಕ್ಷಾಧಿಕಾರಿ ದಿವ್ಯಾ ಮಾತನಾಡಿ, ಮಹಿಳೆಯರು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪೌಷ್ಟಿಕಾಂಶವಿರುವ ಆಹಾರಗಳನ್ನು ಉಪಯೋಗಿಸಬೇಕು. ಈ ಬಗ್ಗೆ ಅಂಗವಾಡಿ ಕೇಂದ್ರಗಳಲ್ಲಿ ಸೂಕ್ತ ಸಲಹೆಗಳನ್ನು ನೀಡಲಾಗುತ್ತದೆ. ಗರ್ಭಿಣಿಯರು ಅತಿ ಹೆಚ್ಚಿನ ಎಚ್ಚರಿಕೆ ವಹಿಸಿ, ಉತ್ತಮ ಆಹಾರವನ್ನು ಉಪಯೋಗಿಸಬೇಕು ಎಂದು ಹೇಳಿದರು.
ಪಂಚಾಯಿತಿ ಸದಸ್ಯೆ ಎಚ್.ಪಿ.ಪ್ರಮೀಳಾ, ಅಂಗನವಾಡಿ ಕಾರ್ಯಕರ್ತೆ ಸವಿತಾ, ಆಶಾ ಕಾರ್ಯಕರ್ತರಾದ ಈಶ್ವರಿ, ಶೈಲಾ, ಕುಸುಮಾ, ಕರವಸೂಲಿಗಾರ ವಿಶ್ವರೂಪಾಚಾರ್ ಇದ್ದರು.