ಗುಡೂರ ಎಸ್‌ಸಿ: ಇಲ್ಲಿ ಆಸ್ಪತ್ರೆ ಇದೇ ವೈದ್ಯರೇ ಇರಲ್ಲ. ರೋಗಿಗಳು ಬರುತ್ತಾರೆ ಚಿಕಿತ್ಸೆಯೇ ಸಿಗಲ್ಲ. ದವಾಖಾನೆ ಅಂತಾರೇ ರೋಗಿಗಳನ್ನು ಗಮನಿಸುವವರೇ ಇಲ್ಲ..!! ಇದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ. ಹೆಸರಿಗೆ ಮಾತ್ರ ಆಸ್ಪತ್ರೆ ಸ್ಥಾಪಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ವೈದ್ಯರು ಇಲ್ಲದೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನತೆ ನರಳುವಂತಾಗಿದೆ. ಅನಾರೋಗ್ಯಕ್ಕೆ ತುತ್ತಾದರೆ ಖಾಸಗಿ ಆಸ್ಪತ್ರೆ ಇಲ್ಲವೇ ದೂರದ ಊರುಗಳ ಕಡೆ ಮುಖ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ.
ಲಕ್ಷಾಂತರ ರೂ. ಖರ್ಚು ಮಾಡಿ ಸರ್ಕಾರ ಆಸ್ಪತ್ರೆ ನಿರ್ಮಿಸಿದೆ. ಆಸ್ಪತ್ರೆಗೆ ಬೇಕಾದ ಸೌಲಭ್ಯ, ಸಿಬ್ಬಂದಿ ಒದಗಿಸಿ ವೈದ್ಯರ ನೇಮಕ ಮಾಡಿದೆ. ಅದೆಕೋ ಗೊತ್ತಿಲ್ಲ. ಅನಾಥ ಪ್ರಜ್ಞೆ ಕಾಡತೊಡಗಿದೆ. ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇರುವುದೇ ಅಪರೂಪ ಸಂಗತಿ. ಕಾಯಿಲೆಗೆ ಒಳಗಾದ ರೋಗಿಗಳ ಆರೋಗ್ಯ ತಪಾಸಣೆ, ಪ್ರಥಮ ಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಮೇಲ್ದರ್ಜೆ ಆಸ್ಪತ್ರೆಗೆ ಕಳಿಸುವುದು ಸೇರಿದಂತೆ ಹಲವಾರು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ ಸದ್ಯ ಯಾವುದೇ ಕಾರ್ಯಗಳಿಲ್ಲದೇ ಸ್ತಬ್ಧವಾಗಿದೆ. ಹಿರಿಯ ವೈದ್ಯರು ಸರಿಯಾಗಿ ಬಾರದೆ ಇರುವುದರಿಂದ ಸಹಾಯಕ ಸಿಬ್ಬಂದಿಗಳು ಕೂಡಾ ಕರ್ತವ್ಯ ಪ್ರಜ್ಞೆ ಮರೆತು ಬಿಟ್ಟಿದ್ದಾರೆ. ಆದಷ್ಟೂ ಬೇಗನೆ ಸಂಬಂಧಿಸಿದ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಆಸ್ಪತ್ರೆಯ ವೈದ್ಯೆ ಡಾ. ಮಮತಾ ಅವರಿಗೆ ಕರೆ ಮಾಡಿದರೆ ಯಾವುದೇ ಉತ್ತರ ನೀಡದೆ ಮೌನ ವಹಿಸುತ್ತಿದ್ದಾರೆ. ಇದರ ಹಿಂದಿನ ಮರ್ಮವೇನು? ಎನ್ನುವುದು ಬಿಡಿಸಲಾಗದ ಗಂಟಾಗಿ ಉಳಿದಿದೆ.
ಆರೋಗ್ಯ ತಪಾಸಣೆಗೆಂದು ಹೋದ ರೋಗಿಯು ಯಾವ ಸಿಬ್ಬಂದಿಯೂ ಕಾಣದಿದ್ದಾಗ ವೈದ್ಯರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಒಂದು ವೇಳೆ ಕರೆ ಸ್ವೀಕರಿಸಿದರೆ ನಾನು ರಜೆಯಲ್ಲಿ ಇದ್ದೇನೆ ಎಂದು ಹೇಳುವುದು ಮಾಮೂಲು. ಸಿಬ್ಬಂದಿಯವರನ್ನು ವಿಚಾರಿಸಿದರೆ ನಮಗೆ ಗೊತ್ತಿಲ್ಲ ವೈದ್ಯರು ಬಂದ ಮೇಲೆ ಬನ್ನಿ ಎಂದು ಹೇಳುತ್ತಾರೆ. ಕಾಯಿಲೆ ನಿವಾರಣೆಗಾಗಿ ಆರೋಗ್ಯ ಕೇಂದ್ರಕ್ಕೆ ಬಂದರೆ ಚಿಕಿತ್ಸೆ ಮಾತ್ರ ದೊರೆಯುತ್ತಿಲ್ಲ. ಹೀಗೆ ಆದರೆ ರೋಗಿಗಳ ಗತಿ ಏನು ಎಂಬುದು ತಿಳಿಯಲಾಗಿದೆ. ರೋಗಿಗಳು ಆರೋಗ್ಯ ತಪಾಸಣೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದಾಗ ಅಲ್ಲಿ ವೈದ್ಯರಾಗಲಿ, ಸಹಾಯಕರಾಗಲಿ, ಯಾವುದೇ ಸಿಬ್ಬಂದಿಯೂ ಇಲ್ಲದೇ ಬಿಕೋ ಎನ್ನುತ್ತಿರುತ್ತೆ.
ನಮ್ಮ ಗ್ರಾಮದ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ವೈದ್ಯರು, ಸಿಬ್ಬಂದಿಗಳು ಇರುವುದಿಲ್ಲ. ಯಾವುದಾದರು ರೋಗಕ್ಕೆ ಚಿಕಿತ್ಸೆ ದೊರೆಯುತ್ತದೆ ಎನ್ನುವ ನಂಬಿಕೆ ಹೊರಟು ಹೋಗಿದೆ. ತಪಾಸಣೆಗೆಂದು ಹೋದ ರೋಗಿಗಳಿಗೆ ಚಿಕಿತ್ಸೆ ದೊರೆಯದೆ ಮತ್ತೆ ರೋಗಕ್ಕೆ ತುತ್ತಾಗುವ ಪರಿಸ್ಥಿತಿ ಬಂದಿದೆ. ಯಾರು ಯಾವಾಗ ಬರ್ತಾರೋ ಯಾವಾಗ ಹೋಗ್ತಾರೋ ಅನ್ನೊದೇ ತಿಳಿಯದಾಗಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಲು ಮೇಲಾಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಾವಿರಾರು ಜನರಿಗೆ ಈ ಆಸ್ಪತ್ರೆ ಮುಖ್ಯವಾದ ಸ್ಥಾನ ಪಡೆದುಕೊಂಡಿದೆ. - ಶಂಭು ಮಾಯಾಚಾರಿ ಗುಡೂರ ಎಸ್.ಸಿ ನಿವಾಸಿ