ಜಿಲ್ಲೆ

ಮಾನ-ಮರ್ಯಾದೆ ಇದ್ರೆ ಕೂಡಲೇ ರಾಜೀನಾಮೆ ಕೊಟ್ಟು ರಾಜಕೀಯ ಮಾಡಿ: ಕೋಲಾರ ಶಾಸಕರ ವಿರುದ್ಧ HDK ಆಕ್ರೋಶ

ಬೆಂಗಳೂರು: ಮಾನ‌-ಮರ್ಯಾದೆ ಇದ್ರೆ ಕೂಡಲೇ ಶಾಸಕ‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಮಾಡಿ ಎಂದು ಕೋಲಾರ ಕ್ಷೇತ್ರದ ಜೆಡಿಎಸ್​ ಶಾಸಕ ಶ್ರೀನಿವಾಸಗೌಡರ ವಿರುದ್ಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶ್ರೀನಿವಾಸಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್​ ಅಭ್ಯರ್ಥಿಗೆ ಕೈ ಕೊಟ್ಟಿದ್ದಾರೆ. ಈ ವಿಚಾರ ತಿಳಿದು ಗರಂ ಆದ ಎಚ್​ಡಿಕೆ, ಆ ಮನುಷ್ಯನಿಗೆ ಮಾನ-ಮರ್ಯಾದೆ ಇದ್ಯಾ? ಕೋಲಾರ ಜನರನ್ನು ವಂಚಿಸಿದ್ದಾರೆ. ವಿಪ್ ಕಾಟಾಚಾರಕ್ಕಿದೆ. ಜೆಡಿಎಸ್​ ಶಾಸಕರನ್ನು ಸಿದ್ದರಾಮಯ್ಯ ಹೈಜಾಕ್ ಮಾಡಿ ಕೀಳು ಮಟ್ಟದ ರಾಜಕಾರಣ ಮಾಡಿದರು. ಇವರು ಪ್ರಜಾಪ್ರಭುತ್ವ ಉಳಿಸುತ್ತಾರಾ? ಬಿಜೆಪಿಯವರಿಗಿಂತ ಇವರೇನು ಕಡಿಮೆ?‌ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಲು ಅವರೆಲ್ಲಾ ಈ ರೀತಿ ಆಟವಾಡಿದರು. ಇವರಿಗೆ ನೈತಿಕತೆ ಇದ್ಯಾ? ಎಂದು ಕಟುವಾಗಿಯೇ ಪ್ರಶ್ನಿಸಿದರು. ಇದು ಕೋಲಾರ ಜನರಿಗೆ ಮಾಡಿದ ಅವಮಾನ. ಪಕ್ಷದಿಂದ ಕ್ರಮ ತೆಗೆದುಕೊಳ್ಳುವುದರಿಂದ ಏನು ಪ್ರಯೋಜನ‌ ಇಲ್ಲ ಎಂದರು.

ಶ್ರೀನಿವಾಸ್ ಗೌಡರಿಂದ ವೋಟ್ ಹಾಕಿಸಿಕೊಂಡ್ರಿ. ನಿಮ್ಮ ಅಭ್ಯರ್ಥಿ ಗೆದ್ದರೆ ಮಾತ್ರ ಕ್ರಾಸ್ ವೋಟ್ ಮಾಡಿಸಿದ್ದಕ್ಕೆ ಸಾರ್ಥಕ ಆಯ್ತು ಅನ್ನಬಹುದು. ಆದರೆ, ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಲು ಹೀಗೆ ಮಾಡಿದ್ದೀರಿ. ಗುಬ್ಬಿ ಶಾಸಕ ಶ್ರೀನಿವಾಸ್​ ಜೆಡಿಎಸ್​ಗೆ ಮತ ಹಾಕುತ್ತೇನೆ ಅಂದ್ರು. ಮತ ಹಾಕಿ ಹೊರ ಬಂದ ಬಳಿಕ ಜೆಡಿಎಸ್​ಗೆ ಹಾಕಿದ್ದೀನಿ ಅಂದಿದ್ದಾರೆ. ಆದರೆ ಅವರು ಮತಪತ್ರದಲ್ಲಿ ಏನು ಮಾಡಿದರು? ಅವರು ಯಾರಿಗೂ ಮತ ಹಾಕಿಲ್ಲ. ಖಾಲಿ ಪತ್ರವನ್ನು ಮತಪೆಟ್ಟಿಗೆಗೆ ಹಾಕಿದ್ದಾರೆ. ಆದರೆ ಜನರ ಮುಂದೆ ಸುಳ್ಳು ಹೇಳಿದ್ದಾರೆ. ಇಂಥ ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ಎಚ್​ಡಿಕೆ ವಾಗ್ದಾಳಿ ನಡೆಸಿದರು.