ಬೆಂಗಳೂರು: ಹಿಜಾಬ್ ವಿವಾದದ ಬಳಿಕ ಶುರವಾದ ವ್ಯಾಪಾರ ಸಂಘರ್ಷ, ಹಲಾಲ್, ಜಟ್ಕಾ ಕಟ್ ವರೆಗೂ ಮುಂದುವರಿದಿತ್ತು. ಇದೀಗ ಆಜಾನ್ಗೂ ವ್ಯಾಪಿಸಿದೆ. ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಇಷ್ಟು ವರ್ಷ ಇಲ್ಲದೇ ಇರುವ ಧ್ವನಿವರ್ಧಕ ವಿವಾದ ಈಗೇಕೆ? ಇದು ಕರ್ನಾಟಕ. ಉತ್ತರ ಪ್ರದೇಶವಲ್ಲ. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿದ್ದರು. ಹೀಗೆ ಮಾಡಿದರೆ ಬಿಜೆಪಿ ಮುಕ್ತವಾಗಲಿದೆ ಎಂದು ಟಾಂಗ್ ಕೊಟ್ಟರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಎಚ್ಡಿಕೆ, ಇತ್ತೀಚಿಗೆ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೇ ಇದೆ. ಬಿಜೆಪಿಯು ಸಮಾಜದ ಸಾಮರಸ್ಯ ಕೆಡಿಸಲಿದೆ ಎಂದು ಈ ಹಿಂದೆಯೇ ಹೇಳಿದ್ದೆ. ಅದೀಗ ಪ್ರಾರಂಭವಾಗಿದೆ. ನಾನು ಬಿಜೆಪಿ ವಿರುದ್ಧ ಸೆಟೆದು ನಿಂತಿರುವುದು ಜನರ ರಕ್ಷಣೆಗಾಗಿ ಅಷ್ಟೇ. ಯಾರನ್ನೂ ಮೆಚ್ಚಿಸಲು ಅಲ್ಲ. ಇಷ್ಟೆಲ್ಲಾ ಆದರೂ ಸರ್ಕಾರ ಜಾಣ ಕಿವುಡಾಗಿದೆ. ಬಿಜೆಪಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಚಿತ್ರನಟ ಚೇತನ್ರ ಒಂದು ಹೇಳಿಕೆಗೆ ಅವರನ್ನು ಜೈಲಿಗೆ ಹಾಕಿದರು. ಕಾಂಗ್ರೆಸ್ನವರು ಏನು ಮಾಡುತ್ತಿದ್ದಾರೆ? ಎಂದು ಕೆಣಕಿದರು.
ಶ್ರೀಲಂಕಾದಲ್ಲಿನ ಹಾಹಾಕಾರ ನಮಗೂ ಬರಲಿದೆ. ಸಾಲ ಮಾಡೋದು, ಲೂಟಿ ಹೊಡೆಯೋದು ನಡೆಯುತ್ತಿದೆ. ನನ್ನ ಸರ್ಕಾರವನ್ನ ಬೀಳಿಸಿದಾಗಲೂ ಆಕ್ರೋಶ ಹೊರ ಹಾಕಲಿಲ್ಲ. ಆಗಲೂ ಸೌಮ್ಯವಾಗಿದ್ದೆ. ಈ ಸರ್ಕಾರಕ್ಕೆ ಪಾಪದ ಕೊಡ ತುಂಬಿದೆ. ಇನ್ಮುಂದೆ ಹೋರಾಟ ಮಾಡುತ್ತೇವೆ. ಜನರನ್ನ ಉದ್ಧಾರ ಮಾಡೋರು ಬಿಜೆಪಿಯವರಾ? ನಾನೇನು ಸಮಾಜ ಬದಲಾವಣೆಯ ಪರಿವರ್ತಕನಲ್ಲ. ನಾನು ವೋಟ್ ಬ್ಯಾಂಕ್ಗಾಗಿ ಮಾತನಾಡುತ್ತಿಲ್ಲ. ಎಲ್ಲಿ ಅನ್ಯಾಯ ಆಗಲಿದೆಯೋ ಅಲ್ಲಿ ಧ್ವನಿ ಎತ್ತುತ್ತೇನೆ. ನಾನು ಬೆಂದ ಮನೆಯಲ್ಲಿ ಗಳ ಹಿರಿಯುವವನಲ್ಲ ಎಂದು ಎಚ್ಡಿಕೆ ಹರಿಹಾಯ್ದರು.
ಮತ ಪಡೆಯುವ ಸಲುವಾಗಿ ಹಿಂದೂ ಎಂದು ಹೇಳುತ್ತಾರೆ. ಅಧಿಕಾರದ ಸುಪ್ಪತ್ತಿಗೆಗಾಗಿ ಕಂದಾಚಾರ ಮಾಡುತ್ತಿರುವವರು ಬಿಜೆಪಿಯವರು. ಕಾಶ್ಮೀರ್ ಫೈಲ್ ಸಿನಿಮಾಗೆ ತೆರಿಗೆ ವಿನಾಯಿತಿ ಕೊಟ್ಟಿದ್ದಾರೆ. ಮಂತ್ರಿಗಳ ಕಚೇರಿಯಲ್ಲಿರುವ ಜನರ ಫೈಲ್ಗಳಿಗೆ ತೆರಿಗೆ ವಿನಾಯಿತಿ ಕೊಡಲಿ. ಜನರ ಜತೆ ಚೆಲ್ಲಾಟ ಆಡುವುದನ್ನ ನಿಲ್ಲಿಸುವ ಬದಲು ಹಲಾಲ್, ಜಟ್ಕಾ ಹಿಡಿದುಕೊಂಡು ಕುಳಿತಿದ್ದಾರೆ. ವಿಶ್ವ ಹಿಂದೂ ಪರಿಷತ್, ಭಜರಂಗ ದಳದವರು ದೇಶವನ್ನು ಉದ್ಧಾರ ಮಾಡುತ್ತಿದ್ದಾರಾ? ದೇಶದ ನಿಜವಾದ ಉದ್ಧಾರಕ ರೈತರು. ರೈತರು ಕಷ್ಟದಲ್ಲಿರುವಾಗ ವಿಶ್ವ ಹಿಂದೂ ಪರಿಷತ್, ಭಜರಂಗ ದಳದವರು ಬಂದಿದ್ದಾರಾ? ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಈ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ಆರ್‌ಎಸ್‌ಎಸ್ ರಿಮೋಟ್ ಕಂಟ್ರೋಲ್ನಲ್ಲಿ ಸರ್ಕಾರ ನಡೆಯುತ್ತಿದೆ. ಬಿಜೆಪಿಯ ಕುತಂತ್ರ ರಾಜಕಾರಣದ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ಸ್ವಾಭಿಮಾನ ಇಟ್ಟುಕೊಂಡೇ ಚುನಾವಣೆ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.