ರಬಕವಿ ಶಂಕರಲಿಂಗ ವೃತ್ತದಲ್ಲಿ ಹಾಲೋಕಳಿ ಜಾತ್ರೆಯಲ್ಲಿ ಹಾಲಗಂಬ ಏರುತ್ತಿರುವ ಯುವಕರು. 
ಜಿಲ್ಲೆ

ರಬಕವಿಯಲ್ಲಿ ಸಂಭ್ರಮದ ಹಾಲೋಕುಳಿ

ರಬಕವಿ/ಬನಹಟ್ಟಿ: ರಬಕವಿ ನಗರದ ಹನುಮಾನ ದೇವರ ಜಾತ್ರೆ ನಿಮಿತ್ತ ಜಾನಪದ ಸೊಗಡಿನ ಪರಂಪರೆ ಬಿಂಬಿಸುವ ಸಂಭ್ರಮ ಹಾಲೋಕುಳಿ ಕ್ರೀಡೆ ಶನಿವಾರ ಸಂಜೆ ನಡೆಯಿತು.

ಹಾಲಗಂಬ ಏರಲು ಅನೇಕ ಯುವಕರು ಹರಸಹಾಸ ಮಾಡಿದರು. ಸಂಜೆ ಹೊತ್ತಿಗೆ ಕಂಬ ಏರುತ್ತಿದ್ದಂತೆ ಮೇಲೆ ಕುಳಿತವರೊಬ್ಬರು ಕಂಬ ಜಾರಲೆಂದೇ ಹಾಲು, ತುಪ್ಪ, ಬಾಳೆಹಣ್ಣಿನ ರಸ ಸೇರಿ ಮತ್ತಿತರ ಜಾರುವ ಪದಾರ್ಥಗಳನ್ನು ಎರಚುತ್ತಿದ್ದರು. ಇವೆಲ್ಲವನ್ನು ಧಿಕ್ಕರಿಸಿ ಯುವಕರು ಕೊನೆಗೂ ಮೇಲೇರಿ ಯಶಸ್ಸು ಕಂಡರು.

ನಗರದ ತುಗಲಿ ಲಕ್ಕವ್ವದೇವಿ ದೇವಸ್ಥಾನದ ಭಗೀರಥ ಟೀಮ್ ಮತ್ತು ಗಟ್ಟಗಿಬಸವೇಶ್ವರ ದೇವಸ್ಥಾನದ ಟೀಮ್‌ನವರು ನಿಗದಿತ ಅವಧಿಯಲ್ಲೇ ಕಂಬ ಏರಿದ್ದರಿಂದ ಎರಡೂ ತಂಡದ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಪ್ರದಾಯದ ಹಳ್ಳಿಯ ಸೊಗಡು ಬಿಂಬಿಸುವ ಹಾಲೋಕುಳಿ ಕ್ರೀಡೆ ವಿವಿಧ ಕಡೆಗಳಲ್ಲಿ ಇಂದಿಗೂ ಜೀವಂತವಾಗಿದೆ. ಈ ಬಾರಿ ತಾಲೂಕಿನಾದ್ಯಂತ ಉತ್ತಮವಾಗಿ ಮುಂಗಾರು ಮಳೆಯಾದ ಹಿನ್ನೆಲೆಯಲ್ಲಿ ರೈತರು, ನೇಕಾರ ಸಮುದಾಯದವರು ಸಂತಸದಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಹಿರಿಯರಾದ ವಲ್ಲಿಸಾಬ ಹುಡೇದಮನಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿ, ಶ್ರೀಶೈಲ ದಲಾಲ, ಪ್ರಭು ಪೂಜಾರಿ, ವಿನೋದ ನಾಯಿಕ, ಡಾ. ರವಿ ಜಮಖಂಡಿ, ಭೀಮಶಿ ಪಾಟೀಲ, ಬೆನಕಪ್ಪ ಬೆಕ್ಕೇರಿ, ಮಹಾದೇವ ಪಾಲಬಾವಿ, ಚನ್ನಪ್ಪ ತೇಲಿ, ಬಸವರಾಜ ಖಪಲಿ, ಪ್ರಭು ಉಮದಿ, ಶಿವಾನಂದ ಹೊಸಮನಿ, ಸಂಗಮೇಶ ಹತಪಾಕಿ, ರೇವಣ್ಣಸಿದ್ದಪ್ಪ ಉಮದಿ ಹಾಗೂ ಜಾತ್ರಾ ಕಮಿಟಿ ಸರ್ವ ಸದಸ್ಯರು ಪಾಲ್ಗೊಂಡಿದ್ದರು.