ಜಿಲ್ಲೆ

ಕಲಕೇರಿಯಲ್ಲಿ ಭೀಕರ ಕೊಲೆ; ನಾಲ್ವರ ಬಂಧನ

Vijyapura - Parsuram Bhasagi

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜ. 19 ರಂದು ಬಹಿರ್ದೆಸೆಗೆ ಹೋಗಿದ್ದ ಈರಗಂಟೆಪ್ಪ ಮಡಿವಾಳಪ್ಪ ಬೇಡರ ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಅಲ್ಲದೇ, ಈತನ ಸಹೋದರ ಮಡಿವಾಳಪ್ಪ ಬೇಡರ ಮೇಲೂ ಹಲ್ಲೆಗೆ ಯತ್ನಿಸಲಾಗಿತ್ತು. ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತಂದಿದ್ದಾರೆ. ಸ್ಥಳೀಯ ನಿವಾಸಿಗಳಾದ ತಿಪ್ಪಣ್ಣ ಬಸಪ್ಪ ರಕ್ಕಸಗಿ, ಶ್ರೀನಿವಾಸ ಶ್ರೀಶೈಲ ವಾಲಿಕಾರ ಹಾಗೂ ಅಯ್ಯಣ್ಣ ಲವಾ ನಾಗರಾಳ ಹಾಗೂ ಸಂತೋಷ ಸಂಗಪ್ಪ ದೊರೆಗೋಳ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ಹಾಗೂ ಇನ್ನೂ ಕೆಲವರು ಸೇರಿ ಗ್ರಾಂದ ಹಣಮಂತ ದೇವರ ಗುಡಿಯ ಹಿಂದೆ ಸಿಗರೇಟ್ ಸೇದುವುದು, ಮದ್ಯ ಸೇವಿಸುವುದು ಹಾಗೂ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು ಮಾಡುತ್ತಿದ್ದರು. ಅದಕ್ಕಾಗಿ ಈರಗಂಟೆಪ್ಪ ಇನ್ನೊಮ್ಮೆ ಈ ರೀತಿ ಮಾಡದಂತೆಯೂ ದೇವಸ್ಥಾನದ ಕಡೆಗೆ ಬರಕೂಡದೆಂದು ಹೇಳಿದ್ದನು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿತರು ಜ. 19 ರಂದು ಬೆಳಗ್ಗೆ 6.30ರ ಸುಮಾರಿಗೆ ಭೀಕರವಾಗಿ ಹಲ್ಲೆ ನಡೆಸಿದ್ದರು. ಕೂಡಲೇ ಗಾಯಾಳು ಈರಗಂಟೆಪ್ಪನನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದನು.

ಒಟ್ಟು 4 ಜನ ಆರೋಪಿತರನ್ನು ದಸ್ತಗೀರ ಮಾಡಿದ್ದು, ಇನ್ನೂಳಿದ ಮೂವರು ಆರೋಪಿಗಳಾದ ಪ್ರಶಾಂತ ಕಳಸಪ್ಪ ವಡ್ಡರ, ಬಲವಂತ ಸಂಗಪ್ಪ ದೊರೆಗೋಳ, ಈರಗಂಟೆಪ್ಪ ಸಂಗಪ್ಪ ದೊರೆಗೋಳ ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.