ಜಿಲ್ಲೆ

'ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ ಮಹಾನ್ ಚೇತನ'

ಆರ್.ಕೃಷ್ಣ

ಮೈಸೂರು: ಅಂದಿನ ಕಾಲದಲ್ಲಿಯೇ ಜಾತಿ, ಮೂಢನಂಬಿಕೆ ಹೋಗಲಾಡಿಸಲು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ ಮಹಾನ್ ಚೇತನ ಕನಕದಾಸರು ಎಂದು ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಕೆ.ಅಶೋಕ ಕುಮಾರ್ ಬಣ್ಣಿಸಿದರು.

ಸಂತ ಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಅಂಗವಾಗಿ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಾರ್ವಕಾಲಿಕ ಸತ್ಯವನ್ನು ಸಾರಿದ ಮಹಾನ್ ಶ್ರೇಷ್ಠ ಭಕ್ತರು ಕನಕದಾಸರು. ಭಕ್ತಿಯ ಪರಾಕಾಷ್ಠೆಯನ್ನು ಮೆರೆದ ಸಂತರಲ್ಲಿ ಕನಕದಾಸರು ಮೊದಲಿಗರು. ಕನಕದಾಸರು ಹರಿದಾಸ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಎಂದು ಹೇಳಿದರು.

ಕಾಲೇಜಿನ ಕನ್ನಡ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಮಾತನಾಡಿ, ಕನಕದಾಸರು ರಚಿಸಿದ ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಮೋಹನ ತರಂಗಿಣಿ, ನಳಚರಿತೆ ಎಂದೆಂದಿಗೂ ಅಮರವಾದ ಅನನ್ಯ ಕೃತಿಗಳು ಎಂದರು.

ಸಮಾಜದಲ್ಲಿ ಸಮಾನತೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕನಕದಾಸರು ಕುಲವನ್ನು ಖಂಡಿಸುವಲ್ಲಿ ಬಸವೇಶ್ವರರು ಹಾಗೂ ಸರ್ವಜ್ಞರಷ್ಟೇ ಧೈರ್ಯವನ್ನು ತೋರಿಸಿದ್ದಾರೆ. ಕುಲಾಚಾರವನ್ನು ಮಾಡುವ ಹೀನ ಮನಸ್ಸಿನವರಿಗೆ ಕುಲ ಕುಲವೆಂದು ಹೊಡೆದಾಡದಿರಿ ಎಂದು ಎಚ್ಚರಿಸಿದ್ದಾರೆ ಎಂದು ತಿಳಿಸಿದರು.

ಹಿರಿಯ ಉಪನ್ಯಾಸಕರಾದ ಜಿ.ವೆಂಕಟರಾಮು, ಶಿಲ್ಪ, ಡಾ.ಡಿ.ಸಿ.ಉಮೇಶ್, ಡಾ.ಲಾವಣ್ಯ, ಮುಷೀರ್, ಪ್ರವೀಣ್ ಕುಮಾರ್, ವಿಂದ್ಯಾ ಬಿ.ಪ್ರಸಾದ್, ಮಧುರಾ, ಶಶಿಕಲಾ, ಪ್ರವೀಣ್ ಕುಮಾರ್, ಹೆಗಡೆ, ದೀಪಿಕಾ, ಭೂಮಿಕಾ, ಮಂಜುನಾಥ್, ಪ್ರಕಾಶ್ ಇತರರು ಇದ್ದರು.