ಜಿಲ್ಲೆ

ಸಮಾಜದ ಏಳಿಗೆಗೆ ಬದುಕು ಮೀಸಲಿಟ್ಟ ಮಹಾಸಂತ

ಹಿರೇಕೆರೂರ: ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಅನುಯಾಯಿ ಸಿರಿಗೆರೆಯ ಮಹಾಸಂತರಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಅವರ ಸಾಧನೆಯ ಶಿಖರದ ಮೇಲೆ ಮೆರೆಯುವ ಘಟನೆಗಳನ್ನು ಮೆಲುಕು ಹಾಕುವುದಕ್ಕಿಂತ ಸಾಧನೆಯ ಪೂರ್ವದಲ್ಲಿ ಎದುರಿಸಿದ ಸಮಸ್ಯೆಗಳನ್ನು ನೆನಪಿಸಿಕೊಂಡರೆ ಅವು ಬದುಕಿಗೆ ನಿಜವಾದ ಫಲ ಕೊಡುತ್ತವೆ ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ಸಿ.ಇ.ಎಸ್ ವಿದ್ಯಾಸಂಸ್ಥೆ ವತಿಯಿಂದ ಬುಧವಾರ ಏರ್ಪಡಿಸಿದ್ದ ತರಳಬಾಳು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 34ನೇ ವರ್ಷದ ಪುಣ್ಯಸ್ಮರಣೆ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅನ್ನ, ಅಕ್ಷರ ಮತ್ತು ಜ್ಞಾನ ಇವುಗಳನ್ನು ನಾಡಿಗೆ ನಿರಂತರವಾಗಿ ನೀಡಿದ ಮಹಾಸ್ವಾಮೀಜಿ. ಸಮಾಜದ ಏಳಿಗೆಗಾಗಿ ತಮ್ಮ ಬದುಕು ಮೀಸಲಿಟ್ಟ ಕಾಯಕ ಯೋಗಿಯ ಸ್ಮರಣೆ ನಿತ್ಯವೂ ಮಾಡಬೇಕು ಎಂದರು.

ಸಂಸ್ಥೆಯ ಮಾಜಿ ಅಧ್ಯಕ್ಷ ಜಗದೀಶ ತಂಬಾಕದ ಮಾತನಾಡಿ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿ ನಡೆದಾಡುವ ದೇವರಂತೆ ಅನ್ನ, ಅಧ್ಯಾತ್ಮ, ಜ್ಞಾನವೆಂಬ ತ್ರಿವಿಧ ದಾಸೋಹ ಉಣ ಬಡಿಸಿದ್ದಾರೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಪ್ರಾಚಾರ್ಯರಾದ ಡಾ. ನಾನಾಸಾಹೇಬ ಎಸ್.ಎಚ್., ಬಿ.ಪಿ. ಹಳ್ಳೇರ, ಮುಖ್ಯಶಿಕ್ಷಕರಾದ ಸಿ.ಎನ್. ಪೂಜಾರ, ಆರ್.ಎಚ್. ಬೆಟ್ಟಳ್ಳೇರ, ಆರ್.ಎಚ್. ಪೂಜಾರ, ಸತೀಶ ಬಣಕಾರ, ಶಿಕ್ಷಕರಾದ ಆರ್.ಎಂ. ಕರೇಗೌಡರ, ಪಿ.ಎಂ. ಡಮ್ಮಳ್ಳಿ, ವಿಜಯಕುಮಾರ ಮುದಿಗೌಡರ, ರವಿಕುಮಾರ ಬಡಳ್ಳೇರ, ದಾನೇಶ ತಿಮ್ಮಿನಕಟ್ಟಿ, ಎಂ.ಎಸ್. ಪಾಟೀಲ, ಸತೀಶ ಲಮಾಣಿ, ಶಶಿಕುಮಾರ ಕಡೂರ ಹಾಗೂ ಶಿಕ್ಷಕರು, ಉಪನ್ಯಾಸಕರು ಇದ್ದರು.