ಜಿಲ್ಲೆ

ಅಹಿಂಸೆಯಿಂದ ಜಗತ್ತನ್ನೇ ಗೆದ್ದ ಮಹಾನ್ ಸಂತ

ಹಳಿಯಾಳ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ವತಿಯಿಂದ ಪಟ್ಟಣದ ಚಂದಾವನದಲ್ಲಿ ಮಹಾತ್ಮ ಗಾಂಧೀಜಿ, ಸರ್ವೆಪಲ್ಲಿ ರಾಧಾಕೃಷ್ಣನ್, ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ದಿನಕರ ದೇಸಾಯಿ ಅವರ ಸ್ಮರಣಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಸಾಹಿತಿ ರಂಗನಾಥ ವಾಲ್ಮೀಕಿ ಉದ್ಘಾಟಿಸಿ ಮಾತನಾಡಿದರು. ‘ಬಾಪೂಜಿ ನೀವು ಅಮರ’ ವಿಷಯ ಕುರಿತು ಮಾತನಾಡಿದ ಕಾರ್ಮೆಲ್ ಪ್ರೌಢಶಾಲೆಯ ಶಿಕ್ಷಕಿ ದಿವ್ಯಾ ಎಂ. ಎಚ್., ‘ಮಹಾತ್ಮ ಗಾಂಧೀಜಿ ಅವರು ಅಹಿಂಸೆಯಿಂದ ಜಗತ್ತನ್ನೇ ಗೆದ್ದ ಮಹಾನ್ ಸಂತ’ ಎಂದರು.

‘ದಿನಕರನ ಸಾಹಿತ್ಯ ಪ್ರಭೆ’ ವಿಷಯದ ಮಂಗಳವಾಡದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಜನಾರ್ಧನ ಮಡಿವಾಳ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಸುಮಂಗಲಾ ಅಂಗಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ದಿನಾಚರಣೆ ನಿಮಿತ್ತ ತಾಲೂಕಿನ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ‘ಆದರ್ಶ ವಿದ್ಯಾರ್ಥಿ’ ಕುರಿತಾದ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ರೇವಣಸಿದ್ದಯ್ಯ ವಿ. ಎಸ್., ಶಿವಪ್ರಸಾದ ಹಿರೇಗುತ್ತಿ, ರೂಪಾ ಶಿಂಧೆ, ಲೀಲಾಧರ ಮೊಗೇರ ಹಾಗೂ ನಾಗರತ್ನಾ ಗಾಂವಕರ ಅವರಿಗೆ ಕವನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಜಿ.ಡಿ. ಗಂಗಾಧರ, ನಿವೃತ್ತ ಉಪನ್ಯಾಸಕ ಸುರೇಶ ಕಡೆಮನಿ, ವಿಠ್ಠಲ್ ಕೋರ್ವೆಕರ, ಕಾಳಿದಾಸ ಬಡಿಗೇರ, ಶಾಂತಾರಾಮ ಚಿಬ್ಬುಲಕರ, ಪ್ರಶಾಂತ ನಾಯಕ ಇತರರಿದ್ದರು.