ಕನಕಪುರ: ಯುವಕರಲ್ಲಿ ಸೌಹಾರ್ದತೆ, ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಗರದ ಬೂದಿಕೇರಿ ಆಟದ ಮೈದಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ. ಉಸ್ತಾದ್ ಪೈಲ್ವಾನ್ ಬಸಪ್ಪನವರ ಸ್ಮರಣಾರ್ಥವಾಗಿ 45 ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಸೊಗಡಿನ ಕುಸ್ತಿ ಪಂದ್ಯಾವಳಿಗೆ ತನ್ನದೇ ಆದ ಇತಿಹಾಸವಿದೆ. ರಾಜ ಮಹಾರಾಜರ ಕಾಲದಿಂದಲೂ ನಮ್ಮ ನಾಡಿನ ಪರಂಪರೆಯ ಭಾಗವಾಗಿ ಈ ಕ್ರೀಡೆಯನ್ನು ಬೆಳೆಸಿಕೊಂಡು ಬರಲಾಗುತ್ತಿದೆ. ಯುವಕರಲ್ಲಿ ಒಗ್ಗಟ್ಟು ಹಾಗೂ ಶಕ್ತಿ ಪ್ರದರ್ಶನಕ್ಕೆ ಇದು ಉತ್ತಮ ಕ್ರೀಡೆಯಾಗಿದೆ. ಹಳ್ಳಿಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಕುಸ್ತಿ ಪಂದ್ಯಾವಳಿಗಳು ನಡೆಯುತ್ತವೆ. ಒಲಿಂಪಿಕ್ಸ್‌ನಲ್ಲಿಯೂ ದೇಶದ ಪ್ರತಿಭೆಗಳು ಅಪ್ರತಿಮ ಪ್ರದರ್ಶನ ನೀಡಿ ಕೀರ್ತಿ ಗಳಿಸಿದ್ದಾರೆ. ಇಂತಹ ನಾಡ ಕ್ರೀಡೆಯನ್ನು ಮತ್ತಷ್ಟು ಉತ್ತುಂಗಕ್ಕೆ ಬೆಳೆಸಬೇಕು ಎಂದರು.
ಶ್ರೀ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಜೇತ ಕುಸ್ತಿಪಟುಗಳಿಗೆ ದಿ. ಪೈಲ್ವಾನ್ ಬಸಪ್ಪನವರ ಪ್ರಶಸ್ತಿ, ಪೈಲ್ವಾನ್ ತಿಗಳರಹಳ್ಳಿ ವೇಣು ಪ್ರಶಸ್ತಿ, ಗೋವಿಂದಪ್ಪ ಪ್ರಶಸ್ತಿ, ಪುಟ್ಟವೀರಯ್ಯ ಪ್ರಶಸ್ತಿ, ದೇವಮ್ಮ ಪ್ರಶಸ್ತಿ, ಭದ್ರಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕೆ.ಎನ್.ದಿಲೀಪ್, ಬ್ಲಾಕ್ ಕಾಂಗ್ರೆಸ್ ಸದಸ್ಯ ಮಧುಸೂದನ್, ಮುತ್ತುರಾಜು, ನಾಗರಾಜು, ಚಿಕ್ಕಪ್ಪ, ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿರಮೇಶ್, ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಕುರುಪೇಟೆ ಜಗನ್ನಾಥ್, ಕುಸ್ತಿ ಸಂಘದ ಅಧ್ಯಕ್ಷ ಪ್ರಕಾಶ್ ಸೇರಿ ವಿವಿಧ ಕುಸ್ತಿ ಗರಡಿಗಳ ಪೈಲ್ವಾನರು, ಸಾರ್ವಜನಿಕರು ಇದ್ದರು.