ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಎಳೆಯ ಪ್ರಾಯದಿಂದ ನಾದಸ್ವರ ಕಲಿಕೆಯೊಂದಿಗೆ ವಿವಿಧೆಡೆ ಉನ್ನತ ಅಧ್ಯಯನ ಸಹಿತ ಉನ್ನತ ಸಾಧನೆ ಮಾಡಿದ ವಿದ್ವಾನ್ ನಾಗೇಶ್ ಎ.ಬಪ್ಪನಾಡು ಅವರಿಗೆ ಶ್ರೀ ದೇವಿಯ ಅನುಗ್ರಹದಿಂದ ರಾಜ್ಯೋತ್ಸವ ಪ್ರಶಸ್ತಿ ಸಹಿತ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಮುಂದೆ ಇನ್ನಷ್ಟು ಪ್ರಶಸ್ತಿಗಳು ಸಿಗುವಂತಾಗಲಿ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಆಕಾಶವಾಣಿ ಕೇಂದ್ರದಿಂದ ನಾದಸ್ವರ ವಾದನಕ್ಕೆ ಪ್ರಥಮ ಟಾಪ್ ಶ್ರೇಣಿ ಪ್ರಶಸ್ತಿ ಪಡೆದ ಶ್ರೀ ಕ್ಷೇತ್ರ ಬಪ್ಪನಾಡುವಿನ ನಾದಸ್ವರ ವಿದ್ವಾಂಸ ನಾಗೇಶ್ ಎ.ಬಪ್ಪನಾಡು ಅವರಿಗೆ ಶುಕ್ರವಾರ ಸಂಜೆ ಶ್ರೀಕ್ಷೇತ್ರದಲ್ಲಿ ದೇವಳ ಹಾಗೂ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಳದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಕಾರ್ಯನಿರ್ವಹಣಾಕಾರಿ ಶ್ವೇತಾ ಪಳ್ಳಿ, ಅರ್ಚಕ ಶ್ರೀಪತಿ ಉಪಾಧ್ಯಾಯ, ಮಣಿಕಂಠ ಅಕಾಡೆಮಿಯ ನಿತ್ಯಾನಂದ ರಾವ್ ಶುಭ ಹಾರೈಸಿದರು. ನಾಗೇಶ್ ಎ.ಬಪ್ಪನಾಡು-ಶ್ರೀಲತಾ ದಂಪತಿಯನ್ನು ಸನ್ಮಾನಿಸಲಾಯಿತು. ಸಾರ್ವಜನಿಕರಿಂದ ಸನ್ಮಾನ ನಡೆಯಿತು. ಒಳಲಂಕೆ ಶ್ರೀ ವೆಂಕಟರಮಣ ದೇವಳದ ಪರವಾಗಿ ಮೊಕ್ತೇಸರ ಅತುಲ್ ಕುಡ್ವ ಚಿನ್ನದ ಪದಕದೊಂದಿಗೆ ನಾಗೇಶ್ ಬಪ್ಪನಾಡು ಅವರನ್ನು ಗೌರವಿಸಿದರು.
ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ, ದೇವಳ ಅರ್ಚಕ ನರಸಿಂಹ ಭಟ್, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಗೋಪಾಲಕೃಷ್ಣ ಭಟ್, ಭುವನಾಭಿರಾಮ ಉಡುಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. ಸುನೀಲ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ್ ಸುವರ್ಣ ಅಭಿನಂದನಾ ಪತ್ರ ವಾಚಿಸಿದರು.
ಬಪ್ಪನಾಡು ಶ್ರೀದೇವಿಯ ಸೇವೆ ಜತೆಗೆ ನಾದಸ್ವರ ಕಲೆಯನ್ನು ವಿವಿಧೆಡೆ ಪಸರಿಸುವ ನಾಗೇಶ್ ಅವರ ಸೇವೆ ವಿಶ್ವಮಾನ್ಯವಾಗಲಿ. - ಡಾ.ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು https://www.vijayavani.net/mobile-call-message-for-mother-child-health-care https://www.vijayavani.net/drug-system-instruction-to-display-color-panel