ಜಿಲ್ಲೆ

ಅದ್ಧೂರಿಯಾಗಿ ನಡೆದ ಮಹಿಳಾ ದಿನಾಚರಣೆಯ

ಕುಶಾಲನಗರ: ಇಲ್ಲಿನ ಅನುಗ್ರಹ ಕಾಲೇಜಿನಲ್ಲಿ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್‌ನ ವತಿಯಿಂದ ಮಹಿಳಾ ದಿನವನ್ನು ಅದ್ಧೂರಿಯಾಗಿ ಇತ್ತೀಚೆಗೆ ಆಚರಿಸಲಾಯಿತು.

ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ಚಿತ್ರಾ ರಮೇಶ್ ರವರು ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಮಹಿಳಾ ದಿನಾಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿ ಕ್ಲಬ್‌ನ ಅಧ್ಯಕ್ಷ ಹರೀಶ್ ಮಾತನಾಡಿ, ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಾಗೂ ಸ್ವಸ್ಥ ಸಮಾಜ ಕಟ್ಟಲು ರೋಟರಿ ಕ್ಲಬ್ ಸೇರಿದಂತೆ ಇತರ ಕ್ಲಬ್‌ಗಳು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿಸಿದರು.

ಇದೇ ಸಂದರ್ಭ ಜಿಲ್ಲಾ ಗೈಡ್ ಸಹಾಯಕ ಆಯುಕ್ತೆ ಸುಲೋಚನ ಅವರು, ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳ ಶಿಸ್ತುಬದ್ಧ ಜೀವನ ಮತ್ತು ವ್ಯಕ್ತಿತ್ವ ವಿಕಸನದಲ್ಲಿ ರೋವರ್ಸ್ ರೇಂಜರ್ಸ್ ಪಾತ್ರದ ಕುರಿತು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ದರ್ಶನ್ ಪ್ರಾರ್ಥಿಸಿ, ಉಪನ್ಯಾಸಕ ಹೇಮಂತ್ ಸ್ವಾಗತಿಸಿದರೆ, ವಿದ್ಯಾರ್ಥಿನಿ ಇಂಚನ ವಂದಿಸಿದರು. ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಹಾಗೂ ಇತರರಿದ್ದರು.