ಜಿಲ್ಲೆ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅದ್ದೂರಿ ಸ್ವಾಗತ

ಮೈಸೂರು: ಬಿಜೆಪಿ ಅಭ್ಯರ್ಥಿಯಾದ ಬಳಿಕ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಥಳೀಯ ನಾಯಕರ ಮನೆಗಳಿಗೆ ದೌಡಾಯಿಸಿ ಬೆಂಬಲ ಕೋರಿದರು.


ಬುಧವಾರ ಇವರಿಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಿಸಲಾಯಿತು. ಮರು ದಿನವೇ ಬೆಂಗಳೂರಿಗೆ ತೆರಳಿದ ಅವರು ಮೊದಲು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಟಿಕೆಟ್ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.


ಅಲ್ಲಿಂದ ನಗರಕ್ಕೆ ವಾಪಸ್ ಆದ ಅವರು, ನಗರದ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದರು. ಅಲ್ಲಿಗೆ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು. ಜೈಕಾರ ಕೂಗಿ ಸಂಭ್ರಮಿಸಿದರು. ಅಲ್ಲಿಂದ ಪಕ್ಷದ ನಗರಾಧ್ಯಕ್ಷ ಎಲ್.ನಾಗೇಂದ್ರ ಮನೆಗೆ ಭೇಟಿ ನೀಡಿದರು.

ನಾಗೇಂದ್ರ, ಅವರ ಕುಟುಂಬದ ಸದಸ್ಯರು ಆತ್ಮೀಯವಾಗಿ ಅಭಿನಂದಿಸಿದರು. ನಂತರ ಅಲ್ಲಿಂದ ವಿದ್ಯಾರಣ್ಯಪುರಂನಲ್ಲಿರುವ ಮಾಜಿ ಶಾಸಕ ಎಸ್.ಎ.ರಾಮದಾಸ್ ಮನೆಗೂ ಭೇಟಿ ನೀಡಿದರು.

ಅಲ್ಲಿಯೂ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸನ್ಮಾನಿಸಲಾಯಿತು. ಯದುವೀರ ಹೋದ ಕಡೆಯೆಲ್ಲ ಪಕ್ಷದ ಕಾರ್ಯಕರ್ತರ ಸಡಗರ ಸಂಭ್ರಮ ಇಮ್ಮಡಿಗೊಂಡಿತ್ತು.