ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲಾದ್ಯಂತ ಹೊಸ ವರ್ಷಾಚರಣೆ ಸಂಭ್ರಮ ಸಡಗರದಿಂದ ನಡೆಯಿತು. ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಜನ ಫೈರ್‌ಕ್ಯಾಂಪ್ ಹಾಕಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು.
ಹೊಸ ವರ್ಷಾಚರಣೆಯ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆಗೆ ಒಂದೂವರೆ ಲಕ್ಷ ಪ್ರವಾಸಿಗರು ಆಗಮಿಸಿದ್ದು, ಎಲ್ಲ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳು ಭರ್ತಿಯಾಗಿವೆ.
ಚಿಕ್ಕಮಗಳೂರು ನಗರದ ಜನತೆ ಹೊಸ ವರ್ಷಾಚರಣೆಯನ್ನು ತಮ್ಮ ತೋಟ ಹಾಗೂ ಫಾಮ್ ಹೌಸ್‌ಗಳಲ್ಲಿ ನಡೆಸಲು ತೆರಳಿದ್ದರಿಂದ, ಚಿಕ್ಕಮಗಳೂರು ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಚಿಕ್ಕಮಗಳೂರಿನ ಐಜಿ ರಸ್ತೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದರಾದರೂ ಸ್ಥಳೀಯರ‌್ಯಾರೂ ಇರಲಿಲ್ಲ.
ನಿನ್ನಯೇ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರು ಶನಿವಾರ ಹಾಗೂ ಭಾನುವಾರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಜೆಯೇ ತಾವು ತಂಗಿದ್ದ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ವಾಪಸ್ ಆಗಿದ್ದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜತೆಗೆ ಕ್ರೀಡಾಚಟುವಟಿಕೆಗಳನ್ನು ನಡೆಸಲಾಯಿತು. ನಗರ ಹೊರವಲಯದ ತೋಟಗಳಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್‌ಗಳ ಹೊಸವರ್ಷಾಚರಣೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾದ್ಯಂತ ಜನತೆ ಕೇಕ್ ಖರೀದಿಗೆ ಮುಗಿಬಿದ್ದಿದ್ದರು. ಹೀಗಾಗಿ ಬೇಕರಿಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು ಕೇಕ್ ಕಟ್ ಮಾಡಿ, ಸಿಹಿ ಹಂಚುವ ಮೂಲಕ ಕೆಲವರು ಹೊಸವರ್ಷವನ್ನು ಸ್ವಾಗತಿಸಿದರು.