ಕನಕಪುರ : ಕರ್ನಾಟಕ ಸುವರ್ಣ ಸಂಭ್ರಮ-50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮದಡಿ ನಗರವನ್ನು ತಲುಪಿದ ಕನ್ನಡಜ್ಯೋತಿ ರಥಯಾತ್ರೆಗೆ ಬೆಳಗ್ಗೆ ತಾಲೂಕು ಆಡಳಿತದಿಂದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಶುಕ್ರವಾರ ಬೆಳಗ್ಗೆ ಕನಕಪುರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕರ್ನಾಟಕದ ಏಕೀಕರಣವನ್ನು ಸಾರುವ ಸ್ಥಬ್ಧ ಚಿತ್ರವನ್ನು ಹೊತ್ತ ರಥಕ್ಕೆ ಚಾಲನೆ ದೊರೆಯಿತು. ಎಂ.ಜಿ. ರಸ್ತೆಯ ಮೂಲಕ ಹೊರಟು ತಾಲೂಕು ಕಚೇರಿ ಬಳಿಯ ಚನ್ನಬಸಪ್ಪ ವೃತ್ತ ತಲುಪಿತು.
ತಹಸೀಲ್ದಾರ್ ಡಾ. ಸ್ಮಿತಾರಾಮ್ ಮಾತನಾಡಿ, ಕರ್ನಾಟಕ ಏಕೀಕರಣಗೊಂಡ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇಂತಹ ಮಹೋನ್ನತ ರಥಯಾತ್ರೆಯು ಕನಕಪುರಕ್ಕೆ ಬಂದಿದೆ. ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲಿಸಿಕೊಂಡು ಬಂದಿರುವುದರಿಂದಲೇ ನಮ್ಮ ಸಂಸ್ಕೃತಿ ಇಂದಿಗೂ ಶ್ರೀಮಂತವಾಗಿ ಉಳಿದಿದೆ ಎಂದರು.
ಶಿಕ್ಷಕ ಮಾಧವರಾವ್ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಕನ್ನಡ ಇತಿಹಾಸವು ಇಡೀ ಭಾರತದ ಇತಿಹಾಸದಲ್ಲೇ ವಿಶಿಷ್ಟವಾಗಿದೆ. ಹಲವು ಮಹನೀಯರ ಪರಿಶ್ರಮದ ಪ್ರತಿಫಲವಾಗಿ 1956 ನವೆಂಬರ್ 1 ರಂದು ರಾಜ್ಯವು ಏಕೀಕರಣವಾಯಿತು. ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾರತದಲ್ಲೇ ಮೊದಲ ಸಂಸ್ಥಾನವಾಗಿ ಮೈಸೂರನ್ನು ಬಿಟ್ಟುಕೊಟ್ಟರು. ಅವರ ಸಾಧನೆಗಳು ಸದಾ ನೆನಪಿನಲ್ಲಿ ಉಳಿದಿವೆ ಎಂದರು.
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ಎಲ್ಲ ಖಾಸಗಿ ಸಂಸ್ಥೆ ಹಾಗೂ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.75 ಉದ್ಯೋಗ ಮೀಸಲು ಭದ್ರತೆಯನ್ನು ನೀಡಲೇಬೇಕು. ಇಲ್ಲವಾದರೆ ಕನ್ನಡಪರ ಸಂಘಟನೆಗಳು ಮತ್ತೊಮ್ಮೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದದರು.
ಗ್ರೇಡ್ 2 ತಹಸೀಲ್ದಾರ್ ಶಿವಕುಮಾರ್, ಶಿರಸ್ತೆದಾರ್ ಜಗದೀಶ್, ತಾಪಂ ಕಾರ್ಯ ನಿರ್ವಾಹಕ ಭೈರಪ್ಪ, ನಗರಸಭೆ ಆಯುಕ್ತ ಮಹದೇವ್, ಸಮಾಜ ಕಲ್ಯಾಣ ಇಲಾಖೆಯ ಜಯಪ್ರಕಾಶ್, ಬಿಇಒ ಸ್ವರೂಪ, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ, ತಂಗರಾಜು, ಶಿಕ್ಷಣ ಇಲಾಖೆಯ ಸತೀಶ್, ರೈತ ಸಂಘದ ಚೀಲೂರು ಮುನಿರಾಜು, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಕನ್ನಡಪರ ಸಂಘಟನೆಯ ಪದಾಧಿಕಾರಿಗಳಾದ ಶಿವನಹಳ್ಳಿ ಶಿವಲಿಂಗಯ್ಯ, ಹೊಂಬಾಳೆಗೌಡ, ಕಬ್ಬಾಳೇಗೌಡ. ಹೊಸದುರ್ಗ ಪ್ರಶಾಂತ್, ಜಯರಾಮು, ಭಾಸ್ಕರ್, ಅಂಗಡಿ ರಮೇಶ್, ವೀರೇಶ್, ಕಾಡೇಗೌಡ, ನೀಲಿ ರಮೇಶ್, ಪುಟ್ಟಲಿಂಗಯ್ಯ, ಅಸ್ಗರ್, ಅಪ್ಪಾಜಿ, ದುರ್ಗೇಶ್ , ಮಿಲ್ಟ್ರಿ ರಾಮಣ್ಣ , ಶ್ರೀನಿವಾಸ್ ಸೇರಿ ಅನೇಕ ಮುಖಂಡರು, ವಿವಿಧ ಸಂಘಟನೆಗಳ ಸದಸ್ಯರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ನಾಗರಿಕರು ಇದ್ದರು.