ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗಡಿಗ್ರಾಮ ದರಸಗುಪ್ಪೆ ಮೂಲಕ ಶ್ರೀರಂಗಪಟ್ಟಣ ಕ್ಷೇತ್ರ ಪ್ರವೇಶಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತ ಹಾಗೂ ತಾಲೂಕು ಕಸಾಪ ವತಿಯಿಂದ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಕಲಾ ವೈಭವದೊಂದಿಗೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದ ಸಂದೇಶದೊಂದಿಗೆ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥಯಾತ್ರೆ ಪಕ್ಕದ ಪಾಂಡವಪುರ ತಾಲೂಕಿನಿಂದ ಗುರುವಾರ ಶ್ರೀರಂಗಪಟ್ಟಣ ತಾಲೂಕು ಪ್ರವೇಶಿತು. ನಂತರ ಕಿರಂಗೂರು ಗ್ರಾಮ ಪಂಚಾಯಿತಿ ವತಿಯಿಂದ ದಸರಾ ಬನ್ನಿಮಂಟಪದ ಬಳಿ ಕನ್ನಡ ಜ್ಯೋತಿ ರಥಯಾತ್ರೆಗೆ ವಿಶೇಷ ಅಭಿಮಾನದ ಗೌರವ ಸಮರ್ಪಿಸಲಾಯಿತು. ಅಂತೆಯೇ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ರಾಷ್ಟ್ರಕವಿ ಅವರ ಪುತ್ಥಳಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಾಬಾ ಸಾಹೇಬರ ಪುತ್ಥಳಿ ಬಳಿ ಕನ್ನಡಾಭಿಮಾನಿಗಳು, ಸಾಹಿತ್ಯಸಕ್ತರು, ಸರ್ಕಾರಿ ಅಧಿಕಾರಿಗಳು, ಕಲಾ ಬಂಧುಗಳು ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಲಾಯಿತು.
ಹಸಿರು ತಳಿರು ತೋರಣಗಳಿಂದ ಸರ್ವಾಲಂಕೃತಗೊಂಡಿದ್ದ ಪಾರಂಪರಿಕ ನಗರಿ ಶ್ರೀರಂಗಪಟ್ಟಣಕ್ಕೆ ಕೋಟೆ ಪ್ರವೇಶ ದ್ವಾರದ ಮೂಲಕ ಮುಖ್ಯರಸ್ತೆಯಲ್ಲಿ ಪಟದ ಕುಣಿತ, ಡೊಳ್ಳು ಕುಣಿತ, ತಮಟೆ ನಗಾರಿಗಳ ಜಾನಪದ ಕಲಾತಂಡಗಳ ಜತೆ ವಿವಿಧ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್ ವಾದ್ಯಗಳೊಂದಿಗೆ ಕನ್ನಡ ತೇರನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಪಟ್ಟಣದ ಪೊಲೀಸರು ಭದ್ರತೆ ಕಲ್ಪಿಸಿದರು.
ಕ್ಷೇತ್ರಪಾಲಕ ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿ ಕನ್ನಡಜ್ಯೋತಿ ರಥಯಾತ್ರೆಗೆ ವಿಶೇಷ ಪೂಜೆ ಸಮರ್ಪಿಸಿ ಪುಷ್ಪಾರ್ಚನೆ ಮಾಡಿ ಭುವನೇಶ್ವರಿಗೆ ಜೈಕಾರ ಮೊಳಗಿಸಲಾಯಿತು. ದೇಸಿ ಹಾಗೂ ವಿದೇಶಿ ಪ್ರವಾಸಿಗರು ಸಹ ರಥಯಾತ್ರೆ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
ಬಳಿಕ ಶ್ರೀನಿವಾಸ ಅಗ್ರಹಾರ, ದೊಡ್ಡಪಾಳ್ಯ ಅರಕೆರೆ ಮಾರ್ಗವಾಗಿ ರಥಯಾತ್ರೆ ಸಂಚರಿಸಿದ್ದು, ಕೊಡಿಯಾಲ ಪೀಹಳ್ಳಿ ಮೂಲಕ ಮಂಡ್ಯ ತಾಲೂಕಿನೆಡೆಗೆ ಸಾಗಿತು. ಮಾರ್ಗದಲ್ಲಿ ಬರುವ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಜನರಿಂದ ಭವ್ಯ ಸ್ವಾಗತ ಕೋರಲಾಯಿತು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ಬಿಇಒ ಮಹೇಶ್, ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಪಿಎಸ್‌ಐ ಶಿವಲಿಂಗ ದಳವಾಯಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಬಿ.ಕುಮಾರ್, ನಗರ ಘಟಕದ ಅಧ್ಯಕ್ಷೆ ಲಯನ್ ಸರಸ್ವತಿ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು, ಕರವೇ ಅಧ್ಯಕ್ಷ ಚಂದಗಾಲು ಸುರೇಶ್, ಮುಖಂಡ ಚಿಂದಗಿರಿಕೊಪ್ಪಲು ಸ್ವಾಮಿಗೌಡ, ಕಾಂಗ್ರೆಸ್ ನಗರಾಧ್ಯಕ್ಷ ಟೆಂಟ್ ಸುರೇಶ್ ಇತರರು ಇದ್ದರು.
22-03