ಜಿಲ್ಲೆ

ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

* ಎಂ.ಪಿ.ವೆಂಕಟೇಶ್ ಮದ್ದೂರು

ಜಾನಪದ ಕಲಾವಿದರ ಕಲಾ ಪ್ರದರ್ಶನ, ಪೂರ್ಣಕುಂಭ ಸ್ವಾಗತ, ಕನ್ನಡದ ಅಭಿಮಾನವನ್ನು ಎಚ್ಚರಿಸುವ ಗೀತೆಗಳು… ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರ ಪೂಜಾ ಕುಣಿತ, ಎಲ್ಲೆಲ್ಲೂ ಕನ್ನಡ ಪರ ಜೈಕಾರ…

ಇದು ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಜಿಲ್ಲೆಯ ಗಡಿಭಾಗ ತಾಲೂಕಿನ ನಿಡಘಟ್ಟದ ಬಳಿ ಭಾನುವಾರ ಆಗಮಿಸಿದಾಗ ಕಂಡು ಬಂದ ಕಣ್ಮನ ಸೆಳೆಯುವ ದೃಶ್ಯಗಳಿವು.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ಗಡಿಭಾಗಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ಚನ್ನಪಟ್ಟಣದ ತಹಸೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಹಾಗೂ ತಾಲೂಕು ಆಡಳಿತ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಬರಮಾಡಿಕೊಂಡರು.

ನಂತರ ಜಾನಪದ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ತಾಲೂಕಿನ ಸೋಮನಹಳ್ಳಿ, ಮದ್ದೂರು ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೆಂಪು ಹಳದಿ ಸಾಲು ಧರಿಸಿಕೊಂಡು ಕೈಯಲ್ಲಿ ನಾಡ ಧ್ವಜ ಹಿಡಿದು ರಥದೊಂದಿಗೆ ಹೆಜ್ಜೆ ಹಾಕಿದರು. ನಂತರ ಕೊಲ್ಲಿ ವೃತ್ತ, ಪೇಟೆಬೀದಿ, ಪ್ರವಾಸಿ ಮಂದಿರ ವೃತ್ತ ಹಾಗೂ ಬೆಂಗಳೂರು ಮೈಸೂರು ಹಳೆ ಹದ್ದಾರಿಯ ಮೂಲಕ ಶಿವಪುರದ ಕೊಪ್ಪ ಹೊಸ ಸರ್ಕಲ್ ಮೂಲಕ ಚಾಮನಹಳ್ಳಿಗೆ ಯಾತ್ರೆ ತೆರಳಿತು.

ರಥಯಾತ್ರೆ ಸಾಗಿದ ಮಾರ್ಗ ಮಧ್ಯೆ ಕನ್ನಡ ಪರ ಸಂಘಟನೆಗಳ ಮುಖಂಡರು, ಕನ್ನಡ ಅಭಿಮಾನಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು. ಕನ್ನಡ ಪರ ಘೋಷಣೆಗಳನ್ನು ಕೂಗಿ ಪುಷಾರ್ಚನೆ ಸಲ್ಲಿಸಿದರು.

ನಂತರ ಕನ್ನಡ ಜ್ಯೋತಿ ರಥಯಾತ್ರೆ ಚಾಮನಹಳ್ಳಿ, ಬೆಸಗರಹಳ್ಳಿ ಅಡ್ಡ ರಸ್ತೆ ಮೂಲಕ ಬೆಸಗರಹಳ್ಳಿ ತಲುಪಿತು. ಈ ವೇಳೆ ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿದ್ದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕನ್ನಡಾಭಿಮಾನಿಗಳು, ಗ್ರಾಮಸ್ಥರು ರಥಯಾತ್ರೆಗೆ ಹೂ ಮಳೆಗೈದು ಅದ್ದೂರಿಯಾಗಿ ಸ್ವಾಗತ ಕೋರಿದರು.

ಬೆಸಗರಹಳ್ಳಿ ಗ್ರಾಮಕ್ಕೆ ಮಧ್ಯಾಹ್ನ ಆಗಮಿಸಿದ ರಥಯಾತ್ರೆಗೆ ವಿವಿಧ ಕಲಾತಂಡಗಳು ಆಕರ್ಷಕ ಪ್ರದರ್ಶನೊಂದಿಗೆ ರಥಯಾತ್ರೆಗೆ ಮೆರಗು ತುಂಬಿದವು. ಬಳಿಕ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಕೊಪ್ಪ ಹೋಬಳಿ ಪ್ರವೇಶ ಮಾಡಿತು. ಮರಳಿಗ ಗ್ರಾಮದ ಮೂಲಕ ಸಂಜೆ ಕೊಪ್ಪ ಗ್ರಾಮಕ್ಕೆ ಅಗಮಿಸಿದ ರಥಯಾತ್ರೆ ವಾಸ್ತವ್ಯ ಹೂಡಿತು. ಆ.19ರಂದು ರಥಯಾತ್ರೆಯನ್ನು ನಾಗಮಂಗಲ ತಾಲೂಕಿಗೆ ಬೀಳ್ಕೊಡಲಾಗುವುದು ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ತಿಳಿಸಿದರು.

ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿಗಳಾದ ಪಣ್ಣೆದೊಡ್ಡಿ ಹರ್ಷ, ಹುಸ್ಕೂರು ಕೃಷ್ಣೇಗೌಡ, ಜಿಲ್ಲಾ ಸಹ ಕಾರ್ಯದರ್ಶಿ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ಕೆ.ಎಸ್.ಸುನೀಲ್‌ಕುಮಾರ್, ಮಾಜಿ ಅಧ್ಯಕ್ಷ ಸಿ.ಅಪೂರ್ವಚಂದ್ರ, ಗ್ರಾಪಂ ಅಧ್ಯಕ್ಷೆ ಕೆ.ಪಿ.ಉಮಾ, ಮಾಜಿ ಅಧ್ಯಕ್ಷ ಎಂ.ಮಹೇಶ್, ಪಿಡಿಒ ಶೀಲಾ, ಮುಖಂಡರಾದ ವೆಂಕಟಚಲಯ್ಯ, ಪೊಲೀಸ್ ಸಿದ್ದರಾಜು, ತೈಲೂರು ಆನಂದಚಾರಿ, ಬಿಇಒ ಸಿ.ಎಚ್.ಕಾಳೀರಯ್ಯ, ತಾಪಂ ಇಒ ರಾಮಲಿಂಗಯ್ಯ, ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಪ್ರಕಾಶ ಕುರ್ಜಿ ಇತರರು ಇದ್ದರು.

ರಥಯಾತ್ರೆಯ ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕರ್ನಾಟಕ ಏಕೀಕರಣಗೊಂಡ 50 ವರ್ಷಗಳ ಬಳಿಕ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಕನ್ನಡಿಗರಲ್ಲಿ ಕನ್ನಡಾಭಿಮಾನದ ಜತೆಗೆ ಕನ್ನಡ ತನವನ್ನು ಬೆಳಸುವ ಉದ್ದೇಶದಿಂದ ಸರ್ಕಾರ ಕನ್ನಡ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಂಡಿದೆ ಎಂದರು.

ಕನ್ನಡ ನಾಡು ನುಡಿ ಭಾಷೆಗೆ ತನ್ನದೆಯಾದ ಶ್ರೀಮಂತಿಕೆ ಇದ್ದು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಜಿಲ್ಲೆಯ ರಥಯಾತ್ರೆಯೂ ಆ.24 ರವರೆಗೆ ವಿವಿಧ ತಾಲೂಕುಗಳಲ್ಲಿ ಸಂಚಾರ ಮಾಡಿ ಆ.24 ರಂದು ಚಾಮರಾಜನಗರ ಜಿಲ್ಲೆಗೆ ಬೀಳ್ಕೊಡಲಾಗುವುದು ಎಂದರು.

ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ ಮಾತನಾಡಿ, ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ ಪ್ರೀತಿಸಬೇಕು. ಕನ್ನಡ ಭಾಷೆ ಶ್ರೀಮಂತಗೊಳ್ಳಲು ಹಲವು ಮಂದಿ ಶ್ರಮಿಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಹೊಂದಿದೆ ಎಂದರು. ಕನ್ನಡ ಭಾಷೆ ಉಳಿಯುವ ಜತೆಗೆ ಜಲ ಮೂಲಗಳಾದ ಕೆರೆ, ಕಟ್ಟೆ, ನದಿಗಳನ್ನು ಉಳಿಸಬೇಕು ಮತ್ತು ಪರಿಸರ ಉಳಿಸಲು ಪ್ರತಿಯೊಬ್ಬರು ಕಟಿಬದ್ಧರಾಗಬೇಕು ಎಂದರು.

ಎಡಿಸಿ ಪೂಜಾ ಕುಣಿತ: ಕನ್ನಡ ಸಂಭ್ರಮ 50 ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಪೂಜಾ ಕುಣಿತ ಪ್ರದರ್ಶಿಸಿದರು. ಜಿಲ್ಲೆಯ ಗಡಿಭಾಗಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದ ಬಳಿಕ ಎಡಿಸಿ ಡಾ.ಎಚ್.ಎಲ್.ನಾಗರಾಜು ಪೂಜಾ ಕುಣಿತ ಮೆರವಣಿಗೆ ಹೊತ್ತು ನೃತ್ಯ ಮಾಡಿದರು. ಇದಕ್ಕೆ ಸ್ಥಳದಲ್ಲಿ ನೆರೆದಿದ್ದ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು ನಾಗರಾಜು ಅವರಿಗೆ ಸಾಥ್ ನೀಡಿ ಹೆಜ್ಜೆ ಹಾಕಿದರು.