ಆನಂದಪುರ: ಕರ್ನಾಟಕ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಭಾನುವಾರ ಅದ್ದೂರಿ ಸ್ವಾಗತ ಕೋರಿ, ಮೆರವಣಿಗೆ ನಡೆಸಲಾಯಿತು.
ಸಾರ್ವಜನಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನ ಗಡಿಭಾಗವಾದ ಗಡಿಕಲ್ ಬಳಿ ಬೃಹತ್ ಹಾರ ಸಮರ್ಪಿಸಿ ಸ್ವಾಗತಿಸಿದರು. ಅಲ್ಲಿಂದ ಬೈಕ್ ಮತ್ತು ಕಾರು ರ‌್ಯಾಲಿ ಮೂಲಕ ಯಡೇಹಳ್ಳಿಯ ವೃತ್ತದವರೆಗೆ ಕರೆತರಲಾಯಿತು. ಯಡೇಹಳ್ಳಿ ವೃತ್ತದಿಂದ ದಾಸಕೊಪ್ಪ ವೃತ್ತದವರೆಗೆ ಸಂಭ್ರಮಾಚರಣೆಯ ಮೆರವಣಿಗೆ ನಡೆಸಲಾಯಿತು. ಗುಲಾಬಿ ಹೂವು ಮತ್ತು ಸೇಬಿನ ಹಾರ ಸಮರ್ಪಿಸಿದ ಸಾರ್ವಜನಿಕರು, ಪಟಾಕಿ ಸಿಡಿಸಿ ಜಯಘೋಷ ಸಾರಿದರು. ಕಾರ್ಯಕರ್ತರು ನರ್ತಿಸಿ ಸಂಭ್ರಮಿಸಿದರು.
ಬಸ್ ನಿಲ್ದಾಣ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ಮೂಲ ಸೌಕರ್ಯ ಅಭಿವೃದ್ಧಿಗೆ ಅತ್ಯಂತ ಆದ್ಯತೆ ನೀಡಿ ತ್ವರಿತ ಕಾಮಗಾರಿ ನಡೆಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪ್ರಮುಖರಾದ ಸೋಮಶೇಖರ್ ಲಾವಿಗೆರೆ, ಚೇತನ್‌ರಾಜ್ ಕಣ್ಣೂರು, ಎನ್.ಉಮೇಶ್, ರಮಾನಂದ ಸಾಗರ, ಗಜೇಂದ್ರ, ರಹಮತ್ ಉಲ್ಲಾ ಇತರರಿದ್ದರು.