ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ರಾಮೋತ್ಸವ ಹಾಗೂ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರಾಮೋತ್ಸವದ ಅಂಗವಾಗಿ ಗ್ರಾಮದ ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಿ, ಕೇಸರಿ ಬಣ್ಣದ ಬಂಟಿಂಗ್,ಬಾಳೆಕಂಬ ಹಾಗೂ ತಳಿರು ತೋರಣ ಕಟ್ಟಲಾಗಿತ್ತು.
ಶನಿವಾರ ರಾತ್ರಿ ಗ್ರಾಮದ ಸಿದ್ದಪ್ಪಾಜಿ ದೇವಾಲಯ ಬಳಿಯಿಂದ ಅಲಂಕೃತ ವಾಹನದ ಮೇಲೆ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯರ ಭಾವಚಿತ್ರ ಇರಿಸಿ ಮಂಗಳ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಭಾನುವಾರ ಬೆಳಗ್ಗೆ ಮಂಗಳವಾದ್ಯ, ಹನುಮಂತ, ರಾಮ, ಸೀತೆ ಮುಂತಾದ ರಾಮಾಯಣದ ನಾನಾ ಪಾತ್ರಧಾರಿಗಳ ವೇಷಧಾರಿಗಳ ಜತೆ ಹನುಮಂತನ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಗ್ರಾಮದ ಮುಖಂಡರು, ಯುವಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.