ಕಿಕ್ಕೇರಿ: ಹೋಬಳಿಯ ಮಾದಾಪುರ ಗ್ರಾಮದಲ್ಲಿ ಮರಳು ಗೌರಿಯ ತೊಟ್ಟಿಲು ಪೂಜೆ ಮೆರವಣಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶುಕ್ರವಾರ ಗ್ರಾಮದ ಹೊರ ವಲಯದಲ್ಲಿರುವ ಹೇಮಾವತಿ ನದಿಗೆ ವಿಪ್ರ ವೃಂದದವರು ತೆರಳಿ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಪೂಜೆ ನೆರವೇರಿಸಿ ನದಿಯಲ್ಲಿ ಮುಳುಗಿ ಕೈಗೆ ಸಿಕ್ಕ ವಸ್ತುವನ್ನು ಭಕ್ತಿಯಿಂದ ಸಂಗ್ರಹಿಸಿದರು. ವಸ್ತುವನ್ನು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ತೊಟ್ಟಿಲಿನಲ್ಲಿ ಪ್ರತಿಷ್ಠಾಪಿಸಿದರು.
ಮಂಗಳವಾದ್ಯದೊಂದಿಗೆ ಪೂಜಿಸಿ ಅಡ್ಡೆ ಮೆರವಣಿಗೆಯೊಂದಿಗೆ ಸಾಗಿದರು. ಗ್ರಾಮದ ಬೀದಿಗಳಲ್ಲಿ ಸಾಗಿದ ದೇವಿಯ ಮೆರವಣಿಗೆಗೆ ಗ್ರಾಮಸ್ಥರು ಭಾಗಿಯಾದರು.
ಮನೆಯ ಮುಂದೆ ಶುಚಿಗೊಳಿಸಿ, ರಂಗೋಲಿ ಬಿಡಿಸಿ ತಳಿರು ತೋರಣಗಳಿಂದ ದೇವಿಯ ಸ್ವಾಗತಿಸಿದರು. ಹಣ್ಣು, ಕಾಯಿ ಅರ್ಪಿಸಿ, ಆರತಿ ಬೆಳಗಿಸಿ ಇಷ್ಟಾರ್ಥಕ್ಕೆ ಪ್ರಾರ್ಥಿಸಿದರು.