ಜಿಲ್ಲೆ

ಕಂಡಾಯಗಳ ಅದ್ದೂರಿ ಮೆರವಣಿಗೆ

ರಾಜಣ್ಣ

ಕೊಳ್ಳೇಗಾಲ: ಪಟ್ಟಣದ ಹೊಸ ಕುರುಬರ ಬಡಾವಣೆಯ ಶ್ರೀ ಮಂಟೇಸ್ವಾಮಿ ಟ್ರಸ್ಟ್‌ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಶ್ರೀಕುರುಬನಕಟ್ಟೆ ಕಂಡಾಯಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು.


ಕಂಡಾಯೋತ್ಸವಕ್ಕೂ ಮೊದಲು ಈಶ್ವರನ ದೇವಾಲಯದಲ್ಲಿ ಕಂಡಾಯಗಳನ್ನು ವಿವಿಧ ಹೂವು ಹಾಗೂ ಹೊಂಬಾಳೆಯಿಂದ ಅಲಂಕರಿಸಿ ಪೂಜೆ ಸಲ್ಲಿಸಿದ ಬಳಿಕ ಮಾರ್ಕೆಟ್ ರಸ್ತೆ ಮೂಲಕ ಕಂಡಾಯ ಉತ್ಸವ ಹೊರಟು ಅಂಬೇಡ್ಕರ್ ರಸ್ತೆ, ಹಳೇ ಕುರುಬರ ಬೀದಿ, ಎಡಿಬಿ ವೃತ್ತ, ಐಬಿ ರಸ್ತೆ ಹಾಗೂ ಆರ್‌ಎಂಸಿ ರಸ್ತೆಯಲ್ಲಿರುವ ಹೊಸ ಕುರುಬರ ಬೀದಿಯಲ್ಲಿರುವ ಶ್ರೀ ಮಂಟೇಸ್ವಾಮಿ ದೇವಸ್ಥಾನಕ್ಕೆ ತಲುಪಿತು.


ದಾರಿಯುದ್ದಕ್ಕೂ ವಾದ್ಯ ಹಾಗೂ ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು.
ದೇವಾಲಯದ ಪಕ್ಕದಲ್ಲಿರುವ ಕನಕಭವನದಲ್ಲಿ ಶ್ರೀಮಠದ ಕಂಡಾಯಗಳಿಗೆ ಮಹಾಮಂಗಳಾರತಿ ನೆರವೇರಿಸಿದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.


ಸೋಮವಾರ ಹೊಸ ಕುರುಬರ ಬೀದಿ ಹಾಗೂ ಹಳೇ ಕುರುಬರ ಬೀದಿಯಲ್ಲಿ ಕಂಡಾಯ ಮೆರವಣಿಗೆ ಮಾಡಲಾಯಿತು. ಈ ವೇಳೆ ಪ್ರತಿ ಮನೆಯವರೂ ಹಣ್ಣು-ಕಾಯಿ ನೀಡಿ ಪೂಜೆ ಸಲ್ಲಿಸಿದರು.


ಹೊಸ ಕುರುಬರ ಬೀದಿಯಜಮಾನರಾದ ಗಿರಿಗೌಡ, ಶಿವಣ್ಣ, ಸಣ್ಣಯ್ಯ, ತಂಬಡಿ ಜಗದೀಶ್, ಶ್ರೀಮಂಟೇಸ್ವಾಮಿ ಟ್ರಸ್ಟ್ ಅಧ್ಯಕ್ಷ ಎಸ್.ಮೂರ್ತಿ, ಉಪಾಧ್ಯಕ್ಷ ಬಿ.ಶಿವಮಲ್ಲು, ನಿರ್ದೇಶಕ ವೆಂಕಟೇಶ್‌ಮೂರ್ತಿ, ಕುಮಾರ್, ಶಾಂತರಾಜು, ವೆಂಕಟೇಗೌಡ, ಅರ್ಚಕ ನಾಗರಾಜು, ಮಹೇಶ್ ಮತ್ತಿತರಿದ್ದರು.