ಚಳ್ಳಕೆರೆ: ನಗರದ ಬಿಇಒ ಕಚೇರಿ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿಯನ್ನು ಶನಿವಾರ ಶೋಭಾಯಾತ್ರೆ ನಡೆಸಿ ವಿಸರ್ಜನೆ ಮಾಡಲಾಯಿತು.
ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ಅಂಬೇಡ್ಕರ್, ನೆಹರು, ಬಸವೇಶ್ವರ ವೃತ್ತ, ಬಳ್ಳಾರಿ ರಸ್ತೆ ಮಾರ್ಗದ ಮೂಲಕ ಬುಡ್ನಹಟ್ಟಿ ಸಮೀಪದ ಹೊಂಡದ ವರಗೆ ಮೆರವಣಿಗೆ ನಡೆಸಲಾಯಿತು. ಬಳಿಕ ವಿಸರ್ಜಿಸಲಾಯಿತು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಮುಖಂಡರಾದ ಸೋಮಶೇಖರ್ ಮಂಡಿಮಠ್, ಸೂರನಹಳ್ಳಿ ವಿಜಯ್, ಜಿ.ಪಿ.ಜಯಪಾಲಯ್ಯ, ಎಂ.ಸಿ.ರಘುಚಂದನ್, ಬಿ.ಎಸ್.ಶಿವಪುತ್ರಪ್ಪ, ಮಾತೃಶ್ರೀ ಮಂಜುನಾಥ ಸೇರಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಸೆ.18ರಂದು ಪ್ರತಿಷ್ಠಾಪಿಸಿದ ಗಣಪತಿ ಪೂಜಾ ಕಾರ್ಯಕ್ರಮಗಳಲ್ಲಿ ಭಜನೆ, ಗಮಕ ಸೌರಭ, ಯಕ್ಷಗಾನ, ಪ್ರಾಚೀನ ಭಾರತದ ಸಾಧನೆಗಳ ಕುರಿತ ಉಪನ್ಯಾಸ, ವಿಚಾರಗೊಷ್ಠಿ, ಜನಪದ ಸಂಗೀತ, ಲಲಿತ ಸಹಸ್ರನಾಮ, ಭರತನಾಟ್ಯ, ಸಂಗೀತ ಸುರ ಸಿಂಚನ, ನಾಟ್ಯ ವೈಭವ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.