ಜಿಲ್ಲೆ

ವೀರವನಿತೆಯ ಅದ್ದೂರಿ ಮೆರವಣಿಗೆ

Chitradurga

ಚಿತ್ರದುರ್ಗ: ಕೋಟೆನಾಡಿನ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡುವ ಮೂಲಕ ಸ್ತ್ರೀ ಕುಲಕ್ಕೆ ಸದಾ ಧೈರ್ಯದ ಸ್ಫೂರ್ತಿಯಾಗಿರುವ ವೀರವನಿತೆ ಒನಕೆ ಓಬವ್ವಳ ರಾಜ್ಯಮಟ್ಟದ ಜಯಂತಿ ಅಂಗವಾಗಿ ಭಾನುವಾರ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಮುಂಭಾಗದಲ್ಲಿ ಭವ್ಯ ಮೆರವಣಿಗೆಗೆ ರಾಜ್ಯ ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷ ನೆಹರು ಚ.ಓಲೇಕಾರ್, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಪಂ ಸಿಇಒ ಎಂ.ಎಸ್.ದಿವಾಕರ್ ಕಹಳೆ ಮೊಳಗಿಸುವ ಮೂಲಕ ಚಾಲನೆ ನೀಡಿದರು.

ಬೆಳ್ಳಿ ವರ್ಣದ ಪುಷ್ಪಾಲಂಕೃತ ಸಾರೋಟಿನಲ್ಲಿ ಓಬವ್ವ, ರಾಜವೀರ ಮದಕರಿನಾಯಕ, ಅಂಬೇಡ್ಕರ್ ಭಾವಚಿತ್ರಗಳು ಕಂಗೊಳಿಸಿದವು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ಹುಲಿ ಮತ್ತು ಹಗಲು ವೇಷ, ಪೂಜಾ-ಪಟಾ ಕುಣಿತ, ಚಿಲಿಪಿಲಿ, ಗಾರುಡಿ ಸೇರಿ ಇತರೆ ಗೊಂಬೆ ಕುಣಿತ, ಕೀಲುಕುದುರೆ ವೇಷಧಾರಿಗಳು ಗಮನ ಸೆಳೆದರು.

ಮೆರವಣಿಗೆ ಸಾಗಿದ ಮಾರ್ಗದುದ್ದ್ದಕ್ಕೂ ಕಹಳೆ, ಪುರುಷ ಮತ್ತು ಮಹಿಳಾ ತಂಡದಿಂದ ಡೊಳ್ಳು ಕುಣಿತ, ಉರುಮೆ, ಬ್ಯಾಂಡ್ ಸೆಟ್, ತ್ರಾಷ್ ವಾದ್ಯ, ಖಾಸಾ ಬೇಡರ ಪಡೆ, ನಂದಿಕೋಲು, ಗಾರುಡಿ ಗೊಂಬೆ, ಕೀಲುಕುದುರೆ ಸೇರಿ ವಿವಿಧ ಜನಪದ ಕಲಾತಂಡಗಳು ಮೆರಗು ನೀಡಿದವು.

ಕನಕ ವೃತ್ತದಿಂದ ಆರಂಭವಾದ ಮೆರವಣಿಗೆ ಸಂಗೊಳ್ಳಿರಾಯಣ್ಣ, ಗಾಂಧಿ, ಓಬವ್ವ, ಅಂಬೇಡ್ಕರ್, ಮದಕರಿನಾಯಕ ವೃತ್ತ ಸೇರಿ ಬಿ.ಡಿ.ರಸ್ತೆ ಮಾರ್ಗದಲ್ಲಿ ಸಂಚರಿಸಿ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ತಲುಪಿತು.

ಓಬವ್ವಳ ವೇಷಭೂಷಣ

ಓಬವ್ವಳ ವೇಷಭೂಷಣ ಧರಿಸಿದ್ದ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿನಿಯರು ಕೈಯಲ್ಲಿ ಒನಕೆಯನ್ನಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ಗಮನಸೆಳೆಯಿತು.