ನವಲಗುಂದ: ಉತ್ತರ ಕರ್ನಾಟಕದಲ್ಲಿಯೇ ಮೊದಲ ಗಣಪತಿ ರಥೋತ್ಸವ ಎಂಬ ಖ್ಯಾತಿ ಪಡೆದ ಇಲ್ಲಿನ ವಿನಾಯಕ ಪೇಟೆಯ ಗಣಪತಿ ದೇವಸ್ಥಾನದಲ್ಲಿರುವ ಕೆಂಪು ಕಲ್ಲಿನ ಗಣಪತಿ ಉತ್ಸವವು 8 ದಿನಗಳವರೆಗೆ ನಡೆದು, 9ನೇ ಹಾಗೂ ಕೊನೆಯ ದಿನವಾದ ಬುಧವಾರ ಸಾವಿರಾರು ಭಕ್ತರ ಹಷೋದ್ಘಾರದ ಮಧ್ಯೆ ಗಣಪತಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಹಾಪ್ರಸಾದದಲ್ಲಿ ಕರಿಗಡಬು, ಹೆಸರಬೇಳೆ ಪಾಯಸ ವಿಶೇಷ ಖಾದ್ಯವಾಗಿತ್ತು, ಗದುಗಿನ ವೀರೇಶ್ವರ ಪುಣ್ಯಾಶ್ರಮದವರು ಆಯೋಜಿಸಿದ್ದ ಗೀತ ಗಾಯನ ಸಂಗೀತ ಕಾರ್ಯಕ್ರಮವನ್ನು ಎಸ್.ಐ. ಜನಾರ್ದನ ಭಟ್ರಹಳ್ಳಿ ಉದ್ಘಾಟಿಸಿದರು. ಸಂಜೆ 5 ಗಂಟೆಗೆ ದೇವಸ್ಥಾನದ ರಾಜಪುರೋಹಿತರಾದ ರಮೇಶ ಸಿದ್ಧಾಂತಿ ಸಹೋದರರು ಹಾಗೂ ಸಂಜು ಹಿರೇಮಠ ಅವರ ಪುರೋಹಿತ್ಯದಲ್ಲಿ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಾಸಕ ಎನ್.ಎಚ್. ಕೋನರಡ್ಡಿ, ಅಣ್ಣಪ್ಪ ಬಾಗಿ, ಸಿದ್ದಲಿಂಗಯ್ಯ ಹಿರೇಮಠ, ನಿಂಗಪ್ಪ ಚವಡಿ, ಮಲ್ಲಪ್ಪ ಬಳಿಗೇರ, ಬ್ರಭು ಬ್ಯಾಳಿ, ಸತೀಶ ಜಿನಗಾ, ವೀರಣ್ಣ ಚವಡಿ, ಶಂಭು ಶಿದ್ರಾಮಶೆಟ್ಟರ, ಮಹಾಂತೇಶ ಬಾಗಿ, ಸಂತೋಷ ನಾವಳ್ಳಿ, ಇತರರು ಉಪಸ್ಥಿತರಿದ್ದರು.
ರಥೋತ್ಸವದಲ್ಲಿ ನೂರಾರು ಮಹಿಳೆಯರು ಆರತಿ ಹಿಡಿದು ಸಾಗಿದರು. ಕರಡಿ ಮಜಲು, ಡೊಳ್ಳು ಕುಣಿತ, ಬೆಂಡು ಬಾಝಾ ನೋಡುಗರ ಗಮನ ಸೆಳೆಯಿತು. 12ನೇ ವರ್ಷದ ಗಣಪತಿ ರಥೋತ್ಸವ ಜರುಗುವ ಮೂಲಕ ಸಂಭ್ರಮದ ಗಣೇಶೋತ್ಸವಕ್ಕೆ ವಿದಾಯ ಹೇಳಲಾಯಿತು.