ಜಿಲ್ಲೆ

ಮೈಸೂರಿನಲ್ಲಿ ಅದ್ದೂರಿಯಾಗಿ ನೆರವೇರಿದ ಕರಗ ಮರೆವಣಿಗೆ

ಸದೇಶ್ ಕಾರ್ಮಾಡ್

ಮೈಸೂರು: ‘ಮಿನಿ ದಸರಾ’ವೆಂದೇ ಖ್ಯಾತಿ ಹೊಂದಿರುವ ‘ಮೈಸೂರು ಕರಗ’ದ ಮೆರವಣಿಗೆ ಶನಿವಾರ ಶ್ರದ್ಧಾ, ಭಕ್ತಿಯೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ದುಷ್ಟ ಶಕ್ತಿಯ ನಿಗ್ರಹಕ್ಕಾಗಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಹಾಗೂ ಸಾಂಕ್ರಾಮಿಕ ರೋಗ ಮತ್ತು ಕ್ಷಾಮ ಬರಗಾಲ ನೀಗಿ ಸಲು ಮಳೆಯ ಅಧಿದೇವತೆಯಾದ ಶ್ರೀ ಮಾರಿಯಮ್ಮನವರ ಕರಗ ಮೆರವಣಿಗೆ ನಡೆಸಲಾಯಿತು. ಇಟ್ಟಿಗೆಗೂಡಿನಲ್ಲಿರುವ ಶ್ರೀ ಮಾರಮ್ಮನವರ ದೇವಸ್ಥಾನದಿಂದ ರಾತ್ರಿ ಹೊರಟ ಕರಗ ನಗರದ ಪ್ಯಾಲೆಸ್ ಆಫೀಸ್ ರಸ್ತೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ನಲ್ಲಪ್ಪಠಾಣಾ ರಸ್ತೆ, ಶಿವರಾಂಪೇಟೆ, ಸಯ್ಯಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ ರಸ್ತೆ, ಕಬೀರ್ ರಸ್ತೆ, ಕಾಳಮ್ಮ ಗುಡಿ ರಸ್ತೆ, ಇರ‌್ವಿನ್ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಅಶೋಕಾ ರಸ್ತೆ, ನಜರ್‌ಬಾದ್, ಮೃಗಾಲಯ ರಸ್ತೆಯ ಮಾರ್ಗವಾಗಿ ಸಾಗಿ ಬೆಳಗ್ಗಿನ ಜಾವ ತಲುಪಲಿದೆ.

ಮೆರವಣಿಗೆಗೆ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಚಾಲನೆ ನೀಡಿದರು. ಈ ಸಂಭ್ರಮದ ಕ್ಷಣಕ್ಕೆ ಶ್ರೀ ಸುತ್ತೂರು ಮಠದ ಕಿರಿಯ ಶ್ರೀಗಳಾದ ಶ್ರೀ ಜಯರಾಜೇಂದ್ರ ಸ್ವಾಮೀಜಿ, ಶಾಸಕ ಟಿ.ಎಸ್. ಶ್ರೀವತ್ಸ, ನಗರ ಪಾಲಿಕೆ ಮಾಜಿ ಸದಸ್ಯೆ ಛಾಯಾ ನವೀನ್, ದೇವಸ್ಥಾನ ಸಮಿತಿ ಕಾರ್ಯದರ್ಶಿ ಸುಂದರಮೂರ್ತಿ, ಪದಾಧಿಕಾರಿಗಳಾದ ಪ್ರಕಾಶ್, ಹರೀಶ್, ಶರತ್, ಅಶೋಕ್ ಹಾಗೂ ಸಾವಿರಾರು ಭಕ್ತರು ಸಾಕ್ಷಿಯಾದರು.

ಮೆರವಣಿಗೆಗೆ ವಿವಿಧ ಕಲಾ ತಂಡಗಳು ಮೆರಗು ನೀಡಿತು. ಬೆಂಗಳೂರಿನ ಶ್ರೀ ಅಂಗಳ ಪರಮೇಶ್ವರಿ ಮತ್ತು ಕಾಳಿಕಾದೇವಿ ದೇವಸ್ಥಾನ ತಂಡದಿಂದ ನವೀಣ ಪಂಬೈ, ಸಿಲುಂಬು, ಉಡಿಕ್ಕೈ, ಸಂಗೀತ ನಾಟ್ಯ ಗಮನ ಸೆಳೆಯಿತು. ಇದರೊಂದಿಗೆ ಜತೆಗೆ ನಾದಸ್ವರ, ಬ್ಯಾಂಡ್ ಸೆಟ್, ವೀರಗಾಸೆ, ದೇವರಕುಣಿತ, ಕಂಸಾಳೆ, ಕೊಂಭು ಕಹಳೆ, ಗಾರುಡಿಗೊಂಬೆ, ಚನ್ನಪಟ್ಟಣದ ತಮಟೆ ಸೇರಿದಂತೆ ಹಲವು ತಂಡಗಳು ಭಾಗವಹಿಸಿದ್ದರು.

ಕರಗ ಮೆರವಣಿಗೆ ಭಾನುವಾರ ಬೆಳಗ್ಗೆ ದೇವಸ್ಥಾನಕ್ಕೆ ತಲುಪಿದ ನಂತರ ಮಧ್ಯಾಹ್ನ 12ಕ್ಕೆ ಅಂಬಲಿ ಪೂಜೆ, ನಂತರ ಅರಿಶಿನ ಓಕುಳಿ ಆಡಲು ಕರಗವು ದೇವಸ್ಥಾನದಿಂದ ಹೊರಡಲಿದೆ. ನಂತರ ಸಂಜೆ 4ಕ್ಕೆ ಭಕ್ತಾದಿಗಳಿಂದ ತಂಬಿಟ್ಟು ಆರತಿ ನೆರವೇರಲಿದೆ. ರಾತ್ರಿ 7ಕ್ಕೆ ಕರಗವು ದೇವಸ್ಥಾನದಿಂದ ಹೊರಟು ಇಟ್ಟಿಗೆಗೂಡಿನ ಎಲ್ಲ ಬೀದಿಗಳಲ್ಲಿ ಆರತಿ ಪೂಜೆ ಸ್ವೀಕರಿಸಿ ದೇವಸ್ಥಾನ ತಲುಪಲಿದೆ. ರಾತ್ರಿ 12ಕ್ಕೆ ಮಹಾ ನೈವೇದ್ಯದೊಂದಿಗೆ ಮಹಾಮಂಗಳಾರತಿ ನೆರವೇರಲಿದೆ. ಮೇ 5 ರಂದು ಬೆಳಗ್ಗಿನ ಜಾವ ಬ್ರಹ್ಮ ಮುಹೂರ್ತದಲ್ಲಿ ಕರಗವನ್ನು ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಲಾಗುವುದು.

ಕರಗ ಹಿನ್ನೆಲೆ

ಇಟ್ಟಿಗೆಗೂಡಿನಲ್ಲಿರುವ ಶ್ರೀ ಮಾರಮ್ಮನವರ ದೇವಸ್ಥಾನದ (ಕರಗ ದೇವಸ್ಥಾನ)ದ ಕರಗ ಮಹೋತ್ಸವಕ್ಕೆ ಶತಮಾನದ ಇತಿಹಾಸವಿದೆ. ಲೋಕಕಲ್ಯಾಣಕ್ಕಾಗಿ ದುರಿತ ನಿವಾರಿಣಿ, ಅಮೃತವರ್ಶಿಣಿಯಾದ ಜಗದಾಂಭೆಗೆ ಕರಗ ಮಹೋತ್ಸವ ನಡೆಸಲಾಗುತ್ತದೆ. ಶತಮಾನಗಳ ಹಿಂದೆ ಊರನ್ನು ಸಾಂಕ್ರಾಮಿಕ ರೋಗವು ಆವರಿಸಿ ದಿನನಿತ್ಯ ಹತ್ತಾರು ಮಂದಿ ಸಾವನ್ನಪ್ಪಲು ಪ್ರಾರಂಭಿಸಿದರು. ಒಂದೆಡೆ ಮನೆಮಂದಿ ರೋಗದಿಂದ ನರಳುತ್ತಿದ್ದರೆ ಮತ್ತೊಂದೆಡೆ ಮಳೆ ಇಲ್ಲದೆ ಕ್ಷಾಮ ಆವರಿಸಿತ್ತು. ಇವೆಲ್ಲದರ ಜತೆಗೆ ರೋಗದಿಂದ ದಿನನಿತ್ಯ ಮೃತಪಡುವವರ ಅಂತ್ಯಸಂಸ್ಕಾರ ನಡೆಸುವುದೇ ಊರ ಜನರ ನಿತ್ಯಕಾಯಕವಾಗಿ ಬಿಟ್ಟಿತ್ತು. ಹಾಗಾಗಿ ಊರಿನ ಜನರೆಲ್ಲರೂ ಸೇರಿ ನಾಡದೇವತೆಯ ಮೊರೆಹೋಗಲು ನಿರ್ಧರಿಸಿದರು. ಆ ಸಂದರ್ಭ ಮೈಸೂರು ಕರಗ ಮಹೋತ್ಸವ ಪ್ರಾರಂಭಿಸಿ ಇಂದಿಗೂ ಮುಂದುವರೆಸಿಕೊಂಡು ಬರಲಾಗಿದೆ. ದುಷ್ಟ ಶಕ್ತಿಯ ನಿಗ್ರಹಕ್ಕಾಗಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಹಾಗೂ ಸಾಂಕ್ರಾಮಿಕ ರೋಗ ಮತ್ತು ಕ್ಷಾಮ ಬರಗಾಲ ನೀಗಿ ಸಲು ಮಳೆಯ ಅಧಿದೇವತೆಯಾದ ಶ್ರೀ ಮಾರಿಯಮ್ಮನವರ ಕರಗ ನಡೆಸಲಾಗುತ್ತದೆ. ಶತಮಾನದ ಹಿಂದೆ ಸಣ್ಣ ಗುಡಿಸಿಲಿನಲ್ಲಿ ಪ್ರಾರಂಭವಾದ ಮೈಸೂರು ಕರಗವು ಅಂದು ಊರಿಗೆ ಮಾತ್ರ ಸೀಮಿತವಾಗಿತ್ತು. ಕಾಲಕ್ರಮೇಣ 1924ರಿಂದ ಕರಗವು ಮೈಸೂರು ನಗರದಲ್ಲಿ ಮೆರವಣಿಗೆ ಪ್ರಾರಂಭಿಸಿತು. ಇಟ್ಟಿಗೆಗೂಡಿಗೆ ಸೀಮಿತವಾಗಿದ್ದ ಕರಗ ನಂತರ ನಗರದಲ್ಲಿ ಮೆರವಣಿಗೆ ಪ್ರಾರಂಭಿಸಿ ಈ ವರ್ಷ 101ನೇ ವರ್ಷವನ್ನು ಪೂರೈಸುತ್ತಿದೆ. ಈ ಕರಗ ಮಹೋತ್ಸವದ ವೈಭವವ ಕಂಡು ಮೈಸೂರು ಅರಸರು ‘ಮಿನಿ ದಸರೆ’ ಎಂದು ಬಣ್ಣಿಸಿದ್ದರು.