ಜಿಲ್ಲೆ

ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ದೂರಿ ಚಾಲನೆ; ದಿವ್ಯ ಭವ್ಯ ಹವ್ಯ ಲೋಕದ ಅನಾವರಣ

ಬೆಂಗಳೂರು: ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಬಹು ಆಕರ್ಷಿತ ಮೂರು ದಿನಗಳ ಸಮ್ಮೇಳನವು ‘ದಿವ್ಯ ಭವ್ಯ ಹವ್ಯ ಲೋಕದ ಅನಾವರಣ’ ಕ್ಕೆ ಸಾಕ್ಷಿಯಾಗಿದೆ. ಅರಮನೆ ಮೈದಾನಕ್ಕೆ ಆಗಮಿಸಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳನ್ನು ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಯವರೆಗೆ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ ಆಹ್ವಾನಿತ ಗಣ್ಯರ ಸಮಕ್ಷಮದಲ್ಲಿ ದೂರದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರಾಚೀನ ಅಹಿಚ್ಛತ್ರ ಗ್ರಾಮದಲ್ಲಿರುವ ಶ್ರೀರಾಮದೇವಾಲಯದ ಅಖಂಡ ಜ್ಯೋತಿಯಿಂದ ತಂದಿದ್ದ ದೀಪದಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಪರವಾಗಿ ಮಾತನಾಡಿದ ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ, ಹವ್ಯಕ ಸಮಾಜ ಪ್ರತಿಭಾವಂತ ಸಮಾಜ. ಹಳ್ಳಿಯಿಂದ ದಿಲ್ಲಿಯವರೆಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಅತ್ಯಂತ ಶಿಸ್ತು ಮತ್ತು ಪ್ರಜ್ಞಾವಂತಿಕೆಗೆ ಹೆಸರಾಗಿರುವ ಹವ್ಯಕ ಸಮಾಜದಲ್ಲಿ ಹುಟ್ಟಿದ್ದ ರಾಮಕೃಷ್ಣ ಹೆಗಡೆಯವರು ನೈತಿಕತೆಯ ಕಾರಣಕ್ಕಾಗಿ ರಾಜೀನಾಮೆ ನೀಡಿ ಇಡೀ ದೇಶದ ರಾಜಕಾರಣದಲ್ಲಿ ಹೊಸ ಸಂದೇಶ ಕೊಟ್ಟ ಮಹಾನ್ ನಾಯಕರಾಗಿದ್ದರು ಎಂದರು. ದೇಶದ ವ್ಯವಸ್ಥೆಯಲ್ಲಿ ನಮ್ಮ ಪೂರ್ವಿಕರು ಜಾತಿಗೆ ಪ್ರಾಮುಖ್ಯತೆ ನೀಡಿಲ್ಲ. ಭಾರತೀಯ ಪುಣ್ಯ ಗ್ರಂಥವಾದ ರಾಮಾಯಣದಲ್ಲಿ ಹೀರೋ ಶ್ರೀರಾಮ, ನಿರ್ಮಾಪಕ ವಾಲ್ಮೀಕಿ ಬ್ರಾಹ್ಮಣರಲ್ಲ. ಆದರೂ ಅವರನ್ನು ಪೂಜಿಸಲಾಗುತ್ತಿದೆ. ಆದರೆ ಬ್ರಾಹ್ಮಣನಾಗಿದ್ದ ರಾವಣನದು ವಿಲನ್ ಪಾತ್ರ. ಮೌಲ್ಯಯುತ ಬದುಕಿಗೆ ಗೌರವ ನೀಡುವುದು ನಮ್ಮ ಪರಂಪರೆ. ಜಾಗತಿಕ ಮಟ್ಟದಲ್ಲಿ ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಹವ್ಯಕ ಸಮಾಜದ ಅನೇಕ ಯುವಕರು ಸ್ವಂತ ಉದ್ದಿಮೆಗಳನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗಿ ಬದಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜೋಶಿ ವಿವರಿಸಿರು. ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ, ನಾನು ಎಂಬ ಭಾವನೆ ನಿರ್ಮೂಲನೆಯಾಗಿ ನಾವು ಎಂಬ ಭಾವನೆ ಮೂಡಿಸುವುದೇ ಈ ಸಮಾವೇಶದ ಉದ್ದೇಶ. ನಾವು ಎಂಬ ಭಾವನೆ ಮುಂದುವರೆದು ಸಮಾಜ, ನಾಡು, ದೇಶ, ವಿಶ್ವ ಎಂಬ ವಿಶಾಲತೆಯನ್ನು ಮೂಡಿಸಲು ಕಾರಣವಾಗುತ್ತದೆ. ಯಾವುದೇ ವಿಷಯದಲ್ಲಾದರೂ ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ. ಹವ್ಯಕರ ಸಮಾಜ ಜನಸಂಖ್ಯೆಯ ದೃಷ್ಟಿಯಿಂದ ಕಡಿಮೆ ಇದ್ದರೂ; ಜ್ಞಾನ, ಬುದ್ಧಿವಂತಿಕೆ, ಸಮಾಜಕ್ಕೆ ಕೊಡುಗೆ ದೃಷ್ಟಿಯಿಂದ ಪ್ರಮುಖವಾಗಿದೆ. ಇದಕ್ಕೆ ಸಾಕ್ಷಿ ಸಾವಿರ ವರ್ಷಗಳ ಹಿಂದೆ ಮಯೂರವರ್ಮ ದೂರದ ಅಹಿಚ್ಛತ್ರದಿಂದ ಹವ್ಯಕರನ್ನು ಇಲ್ಲಿಗೆ ಕರೆತರಲು ಕಾರಣ ಆ ಕಾಲಕ್ಕೆ ಈ ಸಮುದಾಯ ಸರ್ವೋತ್ತಮರಾಗಿದ್ದರು ಎಂಬುದಾಗಿದೆ. ನಮ್ಮ ಸಮುದಾಯ ಸಾಗಿದ ದೂರ, ಏರಿದ ಎತ್ತರ, ಇಳಿದ ಪಾತಾಳದ ಅವಲೋಕನ ಮಾಡಲು ಈ ಸಮಾವೇಶ ವೇದಿಕೆಯಾಗಲಿ ಎಂದು ಹೇಳಿದರು. ಕಾರ್ಯಕ್ರಮದ ಮೊದಲಿಗೆ ಗುರುವಾರ ಅಗಲಿದ ಚೇತನ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷದ ಮೌನಾಚರಣೆ ಮಾಡಲಾಯಿತು. ಸಮಾರಂಭದಲ್ಲಿ ಮಂತ್ರಾಲಯ ಮಠದ ಶ್ರೀಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು, ಆದಿಚುಂಚನಗಿರಿ ಶಾಖಾಮಠದ ಶ್ರೀಸೌಮ್ಯನಾಥ ಸ್ವಾಮೀಜಿ, ಹೊರನಾಡು ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಸಮ್ಮೇಳನದ ಗೌರವಾಧ್ಯಕ್ಷ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಪತ್ರಕರ್ತ ವಿಶ್ವೇಶ್ವರ ಭಟ್, ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ ಮತ್ತಿತರರು ಉಪಸ್ಥಿತರಿದ್ದರು.

ಹವ್ಯಕ ಸಮಾಜ ಕ್ಷೀಣಿಸುತ್ತಿರುವುದಕ್ಕೆ ಆತಂಕ

ಕಳೆದ ಮೂರು ದಶಕಗಳಲ್ಲಿ ಹವ್ಯಕ ಸಮುದಾಯ ಜನಸಂಖ್ಯೆ ಅರ್ಧದಷ್ಟು ಕ್ಷೀಣಿಸಿದೆ. ಇದು ಆತಂಕಕಾರಿಯಾಗಿದ್ದು, ಸಮುದಾಯದ ಜನ ಕನಿಷ್ಟ ಮೂರು ಮಕ್ಕಳನ್ನಾದರೂ ಹೆರಬೇಕು ಎಂದು ಶ್ರೀರಾಘವೇಶ್ವರ ಶ್ರೀಗಳು ಸಲಹೆ ನೀಡಿದರು. ಸಮಾಜಕ್ಕೆ, ದೇಶಕ್ಕೆ ಒಳಿತು ಮಾಡುವ ‘ಹವ್ಯಕ ತಳಿ’ ಸಂರಕ್ಷಣೆ ಮಾಡುವ ಅವಶ್ಯಕತೆ ಇದೆ. ಹೆಚ್ಚಿಗೆ ಮಕ್ಕಳಾಗುವುದನ್ನು ಹೊರೆ ಎಂದು ಭಾವಿಸುವುದು ತಪ್ಪು. ಮಕ್ಕಳು ನಿಜವಾದ ಸಂಪತ್ತು. ಹಳ್ಳಿಗಳಲ್ಲಿ ಎಷ್ಟೋ ಮನೆಗಳ ಬಾಗಿಲು ಬಂದ್ ಆಗಿವೆ. ತೆರೆದಿದ್ದರೂ ಕೇವಲ ಬಿಳಿತಲೆಯ ಹಿರಿಯರು ಮಾತ್ರ ಕಾಣಿಸುತ್ತಿದ್ದಾರೆ. ಇದು ಸಮುದಾಯ ಕ್ಷೀಣಿಸುತ್ತಿರುವುದರ ಸಂಕೇತ. ಆದ್ದರಿಂದ ಕನಿಷ್ಟ ಮೂರು ಮಕ್ಕಳನ್ನು ಹೆರಬೇಕು. ಹಾಗೆ ಮೂರು ಮಕ್ಕಳನ್ನು ಹೆತ್ತವರಿಗೆ ‘ವೀರಮಾತೆ’ ಎಂಬ ಪ್ರಶಸ್ತಿ ನೀಡಲಾಗುವುದು. ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ಆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮಠವೇ ನೋಡಿಕೊಳ್ಳಲಿದೆ. ಯಾವುದೇ ಸಮಾವೇಶಗಳು ನಡೆದಾಗ ಸರ್ಕಾರಕ್ಕೆ ಆಯೋಜಕರು ಬೇಡಿಕೆ ಇಡುತ್ತಾರೆ. ಆದರೆ ನಾವು ಸರ್ಕಾರಕ್ಕೆ ಯಾವುದೇ ಬೇಡಿಕೆ ಸಲ್ಲಿಸುವುದಿಲ್ಲ ಬದಲಾಗಿ ಸಮಾಜಕ್ಕೆ ಈ ಬೇಡಿಕೆ ಸಲ್ಲಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.

"ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಹವ್ಯಕ ಸಮುದಾಯ ಪಾದಾರ್ಪಣೆ ಮಾಡದ ಕ್ಷೇತ್ರವಿಲ್ಲ. ವಿಜ್ಞಾನ, ತಂತ್ರಜ್ಞಾನ, ಪತ್ರಿಕೋದ್ಯಮ, ರಾಜಕೀಯ, ಕೃಷಿ, ಜ್ಯೋತಿಷ್ಯ, ವೈದಿಕತ್ವ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿರುವ ಹವ್ಯಕ ಸಮುದಾಯ ಸಮಾಜಕ್ಕೆ ಕೊಟ್ಟು ಕೊಡುಗೆ ಅಪಾರ." - ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ, ಮಂತ್ರಾಲಯ
"ಹವ್ಯಕ ಸಮಾಜ ಯಾವುದನ್ನೂ ಬೇಡುವ ಸಮಾಜವಲ್ಲ; ಇದು ನೀಡುವ ಸಮಾಜ. ಸಮಾಜದ ಹಲವು ಸಂಕಷ್ಟ, ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟ ಕೀರ್ತಿ ಹವ್ಯಕ ಸಮಾಜಕ್ಕೆ ಸಲ್ಲುತ್ತದೆ. ಈ ಸಮಾಜ ಅತ್ಯಂತ ಬುದ್ಧಿವಂತ, ಪ್ರತಿಭಾವಂತ ಸಮಾಜ." -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
"ಜಾತ್ಯಾತೀತತೆ ಎಂಬುದನ್ನು ಕೇವಲ ಹಿಂದುಗಳಿಗೆ ಮಾತ್ರ ಅನ್ವಯಿಸುತ್ತಾರೆ. ಇತರೆ ಧರ್ಮಗಳು ಕೂಡಾ ಅದನ್ನು ಪಾಲಿಸಬೇಕು. ಬ್ರಾಹ್ಮಣರನ್ನು ವಿನಾ ಕಾರಣ ದೂಷಿಸುವ ಕೆಲಸ ನಡೆಯುತ್ತಿದೆ. ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಓಡಾಡುವವರು, ಅದೇ ಸಂವಿಧಾನದಲ್ಲಿ ಹೇಳಿರುವ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ ನೀಡಬೇಕೆಂಬ ಅಂಶವನ್ನು ಅನುಷ್ಠಾನಕ್ಕೆ ತರಲು ಸಿದ್ಧರಿಲ್ಲ" -ಅಶೋಕ ಹಾರನಹಳ್ಳಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ