ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.28ರಿಂದ ಅ.7ರವರೆಗೆ ಆಯೋಜಿ ಸಿದ್ದ ಯುವ ಸಂಭ್ರಮಕ್ಕೆ ಬುಧವಾರ ರಾತ್ರಿ ಸಂಭ್ರಮದ ತೆರೆ ಬಿದ್ದಿತು. ಹತ್ತು ದಿನಗಳ ಕಾಲ ಸಾವಿರಾರು ಯುವ ಮನಸ್ಸುಗಳನ್ನು ನೃತ್ಯ, ಸಂಗೀತ ಮತ್ತು ಕಲಾ ವೈಭವದಲ್ಲಿ ತೇಲಿಸಿದ ಯುವ ಸಂಭ್ರಮದ ಕೊನೆಯ ದಿನ ಮೈಸೂರಿನ ಮನೆಮಗ, ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ಸಂಗೀತ ಯುವ ಸಂಭ್ರಮವನ್ನು ಮತ್ತಷ್ಟು ರಂಗೇರಿಸಿತು.
ವೇದಿಕೆಗೆ ವಿಜಯ ಪ್ರಕಾಶ್ ಅವರು ‘ಹಲೋ ಹಲೋ ಹಲೋ ನನ್ ಮನಸು ಇಲ್ಲೇ ಎಲ್ಲೋ ಕಳೆದೋಯ್ತೇ..’ ಹಾಡಿನ ಮೂಲಕ ಭರ್ಜರಿ ಎಂಟ್ರಿ ನೀಡುತ್ತಿದ್ದಂತೆ ಯುವ ಸಮೂಹ ಸಂಭ್ರಮದಿಂದ ಕುಣಿದು ಕುಪ್ಪಳಿಸಿತು. ಬಳಿಕ ಗಾಯಕಿ ಅನುರಾಧ ಭಟ್ ಅವರೊಂದಿಗೆ ಸಿಂಗಾರ ಸಿರಿಯೇ.., ಏನಮ್ಮಿ ಏನಮ್ಮಿ.., ಕಾಣದಂತೆ ಮಾಯವಾದನು.., ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ..ಸೇರಿದಂತೆ ಹಲವು ಹಾಡುಗಳು ಯುವ ಮನಸ್ಸುಗಳನ್ನು ಸಂಗೀತದ ಲೋಕಕ್ಕೆ ಕರೆದೊಯ್ದವು. ವಿಜಯ ಪ್ರಕಾಶ್ ಅವರಿಂದ ತರಬೇತಿ ಪಡೆದ ಯುವ ಪ್ರತಿಭೆಗಳು ಸಹ ಇದೇ ವೇದಿಕೆಯಲ್ಲಿ ವಿವಿಧ ಹಾಡುಗಳನ್ನು ಹಾಡಿ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.
ಯುವ ಸಂಭ್ರಮದ ಹತ್ತು ದಿನಗಳ ಅವಧಿಯಲ್ಲಿ ಪ್ರತಿದಿನ ವಿವಿಧ ಕಾಲೇಜುಗಳ 30ರಿಂದ 40 ತಂಡಗಳು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಿದವು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಜನರು ಶಿಳ್ಳೆ, ಚಪ್ಪಾಳೆ ಹಾಗೂ ಹರ್ಷೋದ್ಘಾರದ ಮೂಲಕ ಕಲಾ ತಂಡಗಳಿಗೆ ಪ್ರೋತ್ಸಾಹ ನೀಡಿದರು. ನಾಡಿನ ಕಲೆ, ಸಂಸ್ಕೃತಿ ಹಾಗೂ ಯುವ ಪ್ರತಿಭೆಗಳ ಅನಾವರಣಕ್ಕೆ ಯುವ ಸಂಭ್ರಮ ವೇದಿಕೆಯಾಯಿತು.
ಅಂತಿಮ ದಿನವಾದ ಬುಧವಾರ ತಾಂಡವಪುರದ ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ‘ಆಟ ಹುಡುಗಾಟವೋ.. ಪರಮಾತ್ಮನಾಟವೋ..ಹಾಡಿನ ಮೂಲಕ ಶಿವನ ವೈಭವವನ್ನು ನೃತ್ಯದ ಮೂಲಕ ತೆರೆದಿಟ್ಟಿತು. ತುಮಕೂರು ವಿಶ್ವವಿದ್ಯಾಲಯದ ತಂಡ ವರಾಹ ರೂಪಂ ದೈವ ವರಿಷ್ಠಂ.. ಹಾಡಿಗೆ ಹೆಜ್ಜೆ ಹಾಕಿ ಪಂಜುರ್ಲಿ ದೇವತೆಯ ಮಹಿಮೆಯನ್ನು ಅನಾವರಣಗೊಳಿಸಿತು.
ಕಮಡೋಳಿ ಗ್ರಾಮ ಪಂಚಾಯಿತಿ ತಂಡದ ಮೈ ನವಿರೇಳಿಸುವ ಮಲ್ಲಗಂಬ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಮಳವಳ್ಳಿ ಸರ್ಕಾರಿ ಪಾಲಿಟೆಕ್ನಿಕ್ ತಂಡ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ವಿವಿಧ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಅಪ್ಪುವನ್ನು ನೆನಪಿಸಿಕೊಂಡಿತು. ಈ ವೇಳೆ ಪ್ರೇಕ್ಷಕರು ಮೊಬೈಲ್ ಟಾರ್ಚ್‌ಗಳನ್ನು ಬೆಳಗಿಸಿ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದ ದೃಶ್ಯ ಮನಮಿಡಿಯುವಂತಿತ್ತು.
ನಗರದ ಓಂಕಾರ್‌ಮಾಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ ವಿವಿಧ ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಕನ್ನಡಾಭಿಮಾನ ಮೆರೆದರು. ಹಾಡಿನ ತಾಳಕ್ಕೆ ಪ್ರೇಕ್ಷಕರೂ ಹೆಜ್ಜೆ ಹಾಕಿ ಕಲಾ ತಂಡದೊಂದಿಗೆ ಸಂಭ್ರಮ ಹಂಚಿಕೊಂಡರು.
ಮಾನಸಗಂಗೋತ್ರಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ತಂಡ ಅದ್ಭುತ ಪೂಜಾ ಕುಣಿತ ಪ್ರದರ್ಶಿಸಿದರೆ, ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರುದ್ರಕಾಳಿ ನೃತ್ಯದ ಮೂಲಕ ಭಕ್ತಿ ಭಾವ ಮೂಡಿಸಿದರು. ಮೈಸೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನ ತಂಡ ಗಾಯಕಿ ಎಸ್. ಜಾನಕಿ ಅವರು ಹಾಡಿರುವ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಗಾನಕೋಗಿಲೆಗೆ ವಿಶೇಷ ನಮನ ಸಲ್ಲಿಸಿತು. ಈ ವೇಳೆ ಪ್ರೇಕ್ಷಕರು ಮೊಬೈಲ್ ಟಾರ್ಚ್‌ಗಳನ್ನು ಬೆಳಗಿಸಿ ಎಸ್. ಜಾನಕಿ ಅವರಿಗೆ ಗೌರವ ಅರ್ಪಿಸಿದರು.
ಫಸ್ಟ್ ಲವ್ ಗುರು ತಂಡ ಭೇಟಿ:
ಈ ನಡುವೆ ಫಸ್ಟ್ ಲವ್ ಗುರು ಚಿತ್ರದ ತಂಡದ ಸದಸ್ಯರು ಹಿರಿಯ ನಟಿ ಚಂದ್ರಕಲಾ ಅವರ ನೇತೃತ್ವದಲ್ಲಿ ಯುವ ಸಂಭ್ರಮದ ವೇದಿಕೆಗೆ ಭೇಟಿ ನೀಡಿ ಚಿತ್ರದ ಕುರಿತು ಮಾತನಾಡಿದರು.