ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ಚಿಕ್ಕೂರು ಗ್ರಾಮದಲ್ಲಿ ಅರಳಿ ಮರದಮ್ಮ, ಈರಣ್ಣ ಸ್ವಾಮಿ ಹಾಗೂ ಹೊಂಗ್ಯಮ್ಮ ದೇವಿಯವರ ದಿವ್ಯ ರಥೋತ್ಸವ ಕಾರ್ಯಕ್ರಮಗಳು ಸೋಮವಾರದಿಂದ ಆರಂಭವಾಗಿದ್ದು, ಮಾ.14ರ ಶುಕ್ರವಾರ ಭವ್ಯ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಸೋಮವಾರು ರಾತ್ರಿ ಪುಣ್ಯಾಹಃ ಮಹಾಗಣಪತಿ ಪೂಜೆ, ಗಂಗಾಸ್ನಾನ, ಮದುವಣಿಗೆ ಶಾಸ್ತ್ರ, ಮಂಗಳವಾರ ಧ್ವಜಾರೋಹಣ, ಮಡಿಲಕ್ಕಿ ಶಾಸ್ತ್ರ, ಬೇವಿನ ಸೀರೆ, ಬಾಯಿಬೀಗ ನೆರವೇರಿತು. ಮಾ.12ರಂದು ಶೀ ಹೊಂಗ್ಯಮ್ಮ ದೇವಿ, ದೂತರಾಯಸ್ವಾಮಿಗೆ ವಿಶೇಷ ಪೂಜೆ ಕೈಂಕರ್ಯ ಸಲ್ಲಿಸಲಾಗುತ್ತದೆ.
ಮಾ.13 ರಂದು ವಾದ್ಯ ಮೇಳದೊಂದಿಗೆ ಶ್ರೀ ಹೊಂಗ್ಯಮ್ಮ ದೇವಿ, ಅರಳಿ ಮರದಮ್ಮ ದೇವಿಯ ಮುತ್ತಿನ ಪಲ್ಲಕಿ ಉತ್ಸವ ಹಾಗೂ ತುಳಸಿ ಹಾರ ಕಾರ್ಯಕ್ರಮ ನಡೆಯಲಿದೆ. ಮಾ.14 ರಂದು ಬೆಳಗ್ಗೆ ಸಿಡಿ ಮಹೋತ್ಸವ ಹಾಗೂ ಮಧ್ಯಾಹ್ನ ಹೊಂಗ್ಯಮ್ಮದೇವಿ ಅರಳಿ ಮರದಮ್ಮ ದೇವಿಯವರ ರಥೋತ್ಸವ ಜರುಗಲಿದೆ.
ಈ ಜಾತ್ರಾ ಮಹೋತ್ಸವದಲ್ಲಿ ಚಿಕ್ಕೂರು, ಲಾಯಲಾಪುರ, ಯಾದವರಹಟ್ಟಿ, ಬಣಜಾರ್ ತಾಂಡ್ಯ ಸೇರಿದಂತೆ ಅಪಾರ ಭಕ್ತರು ಆಗಮಿಸಲಿದ್ದಾರೆ ಎಂದು ದೇವಸ್ಥಾನದ ಗುಡಿಗೌಡರು ಈಶಣ್ಣಗೌಡ ತಿಳಿಸಿದ್ದಾರೆ.