ಜಿಲ್ಲೆ

ಬಾಲೆಹೊಸೂರಲ್ಲಿ ಅದ್ದೂರಿ ಜೋಡಿ ರಥೋತ್ಸವ

ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಮಠ ಮತ್ತು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಅದ್ದೂರಿಯಾಗಿ ಜೋಡಿ ರಥೋತ್ಸವ ನೆರವೇರಿತು. ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ತೊಟ್ಟು ತಂಡೋಪತಂಡವಾಗಿ ದಿಂಗಾಲೇಶ್ವರ ಮಠ ಮತ್ತು ಉತ್ತರಾಭಿಮುಖ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿ ನಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ರಥಕ್ಕೆ ಉಡಿ ತುಂಬಿ, ವಸ್ತ್ರಾಭರಣಗಳನ್ನಿರಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವ ದೃಶ್ಯ ಕಂಡುಬಂದಿತು. ಸಂಜೆ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ನೆರವೇರಿತು. ಅಪಾರ ಭಕ್ತರು ಭಕ್ತಿ-ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಸಮರ್ಪಿಸಿದರು. ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ದಿಂಗಾಲೇಶ್ವರ ಮಠದ ರಥೋತ್ಸವ ಏಕಕಾಲಕ್ಕೆ ಪ್ರಾರಂಭವಾಗಿ ಗ್ರಾಮದ ಮುಖ್ಯ ಸ್ಥಳದಲ್ಲಿ ಶ್ರೀ ಆಂಜನೇಯ ಮತ್ತು ದಿಂಗಾಲೇಶ್ವರ ಮಠದ ರಥಗಳು ಸೇರಿದ ಸಂದರ್ಭದಲ್ಲಿ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು. ಶ್ರೀ ಮಠದಲ್ಲಿ ಪ್ರಾಥಃಕಾಲ ಶ್ರೀ ಗುರು ದಿಂಗಾಲೇಶ್ವರರ ಗದ್ದುಗೆಗೆ ಮಹಾರುದ್ರಾಭಿಷೇಕ, ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದವು.