ಹುಲ್ಲಹಳ್ಳಿ: ಹುಲ್ಲಹಳ್ಳಿ ಹೋಬಳಿಯ ಬೆಳಲೆ ಗೇಟ್ ಬಳಿ ಹಿಂದು ಮತ್ತು ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ಸೈದಾನಿ ಬಿಬಿಮ ಅವರ ಗಂಧದ ಮಹೋತ್ಸವವನ್ನು ವಿಜೃಂಭಣೆಯಿಂದ ಶನಿವಾರ ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಹಜರತ್ ಸೈದಾನಿ ಬೀಬಿಮ ಅವರ ಗಂಧದ ಮಹೋತ್ಸವ ಸಂದರ್ಭದಲ್ಲಿ ಗ್ರಾಮದ ಶ್ರೀ ಇಮ್ಮಡಿ ಚೆನ್ನಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಈ ಪವಿತ್ರವಾದ ದರ್ಗಾದಲ್ಲಿ ಕೇವಲ ಮುಸ್ಲಿಂ ಸಮುದಾಯದವರಷ್ಟೇ ಅಲ್ಲದೇ ಹಿಂದುಗಳು ಸಹ ಹೆಚ್ಚು ಭಾಗವಹಿಸುತ್ತಾರೆ. ತಮ್ಮ ಕಷ್ಟಗಳಿಗೆ ಪರಿಹಾರ ಪಡೆದುಕೊಳ್ಳಲು ಈ ದರ್ಗಾದಲ್ಲಿ ಪ್ರಾರ್ಥನೆ ಮಾಡುತ್ತಾರೆ. ನಾವು ಮೂರು ಬಾರಿ ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ನೀವು ಐದು ಬಾರಿ ನಮಾಜ್ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತೀರ ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವ ನಾರಾಯಣ ಮಾತನಾಡಿ, ಮಾನವ ಕುಲಕ್ಕೆ ಯಾವುದೇ ಜಾತಿ ಇರುವುದಿಲ್ಲ. ಈ ಸಭೆಗೆ ಎಲ್ಲ ಜಾತಿಯ ಧರ್ಮ ಗುರುಗಳು ಭಾಗವಹಿಸಿರುವುದರಿಂದ ಹಿಂದು ಮುಸ್ಲಿಂ ಭಾವೈಕ್ಯತೆಯನ್ನು ಎತ್ತಿ ಹಿಡಿದಿದೆ ಎಂದು ತಿಳಿಸಿದರು.
ಜಾಮಿಯಾ ಮಸೀದಿಯಿಂದ ಪಲ್ಲಕ್ಕಿ ವಾಹನದಲ್ಲಿ ಗಂಧವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ದರ್ಗಾ ಶರೀಫ್‌ಗೆ ಕೊಂಡೊಯ್ದು ವಿಠಲಪುರದ ಗುರುಗಳಾದ ಹಜರತ್ ಸೈಯದ್ ಷಾ ಮಹಮ್ಮದ್ ಉಸ್ಮಾನ್ ಪಾಷ ಖಾದ್ರಿ ತಂಡದ ವತಿಯಿಂದ ಗಂಧವನ್ನು ಅರ್ಪಿಸಲಾಯಿತು. ಪ್ರಸಿದ್ಧ ಕವಾಲಿ ತಂಡದಿಂದ ಕವಲಿ ನಡೆಯಿತು.
ದರ್ಗದ ಗುರುಗಳಾದ ಕೆ.ಆರ್. ಹುಸೇನ್ ದಮ್ಮಿ ರಂಜಾಲಾಡಿ, ಮಾಜಿ ಶಾಸಕರಾದ ಕಳಲೆ ಕೇಶವ್ ಮೂರ್ತಿ, ನಗರಸಭೆ ಉಪಾಧ್ಯಕ್ಷ ರಿಹನಾ ಬಾನು, ಕಮಿಟಿಯ ಅಧ್ಯಕ್ಷ ಹಾಜಿ ನೂರು ಅಹ್ಮದ್, ಗ್ರಾಮ ಪಂಚಾಯಿತಿ ಸದಸ್ಯ ಆನ್ಸರ್ ಅಹಮದ್, ಜಾಮಿಯಾ ಮಸೀದಿ ಅಧ್ಯಕ್ಷ ಮುಶಿರ್ ಅಹಮದ್, ಕಾರ್ಯದರ್ಶಿ, ಜಾವಿಧ ಅಹ್ಮದ್, ನಾಸಿರ್ ಅಹ್ಮದ್, ಸದಸ್ಯರಾದ ಅನ್ಸರ್, ಸಮೀವುಲ್ಲಾ, ಬಾಬು ನೀ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಖಾದರ್, ಟಿ.ಎಸ್.ಕೆ. ಹಮದ್ ಮೋಲವಿ, ಬ್ಲಾಕ್ ಅಧ್ಯಕ್ಷ ಶ್ರೀಕಂಠ ನಾಯಕ ಇತರರು ಇದ್ದರು.