ಬನ್ನೂರು: ಪಟ್ಟಣಕ್ಕೆ ಸಮೀಪದ ಬೀಡನಹಳ್ಳಿ ಗ್ರಾಮದಲ್ಲಿ ನಂದಿ ಬಸವೇಶ್ವರ ಸ್ವಾಮಿಯ 13ನೇ ವರ್ಷದ ಕೊಂಡೋತ್ಸವದ ಪ್ರಯುಕ್ತ ಭಾನುವಾರ ಬಂಡಿ ಓಟ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆಯಿಂದ ನಂದಿಬಸವೇಶ್ವರ ದೇವಾಲಯವನ್ನು ಹೂ ಮತ್ತು ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ಗ್ರಾಮದ ಬೀದಿಗಳಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಡಿಸಲಾಗಿತ್ತು. ದೇಗುಲದಲ್ಲಿ ವಿವಿಧ ಹೋಮ, ಹವನಗಳನ್ನು ಮಾಡಿ ಸಂಪ್ರದಾಯದಂತೆ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಯಿತು. ನಂತರ 3ನೇ ಸೋಮವಾರ 5 ಗಂಟೆಗೆ ನಡೆಯುವಂತ ಕೊಂಡೋತ್ಸವಕ್ಕೆ ನಿಯಮಾನುಸಾರವಾಗಿ ಮುಚ್ಚಿದಂತಹ ಕೊಂಡವನ್ನು ತೆರವುಗೊಳಿಸಿ ಕೊಂಡೋತ್ಸವಕ್ಕೆ ಸಿದ್ಧತೆ ಮಾಡಲಾಯಿತು.
ನಂತರ ವಿವಿಧ ಗ್ರಾಮದಿಂದ ಬಂದಿದ್ದಂತಹ ಸುಮಾರು 30 ಜೊತೆ ಬಂಡಿಗಳನ್ನು ದೇಗುಲದ ಸುತ್ತಾ ಓಡಾಡಿಸಲಾಯಿತು. ಇದಕ್ಕು ಮುನ್ನ ಬಂಡಿಗಳು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದವು. ವಿವಿಧ ಗ್ರಾಮ, ತಾಲೂಕು, ಜಿಲ್ಲೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದರು.