ಜಿಲ್ಲೆ

ಭರವಸೆ ನೀಡಿ ಮರೆತ ಸರ್ಕಾರ

ವೀರೇಶ ಸೌದ್ರಿ

ವಿಜಯವಾಣಿ ವಿಶೇಷ ಗದಗ
ಜವಳಿ ಕ್ಷೇತ್ರಕ್ಕೆ 10 ಎಚ್‌ಪಿವರೆಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸುವುದಾಗಿ ನೀಡಿದ್ದ ಭರವಸೆಯನ್ನು ರಾಜ್ಯ ಸರ್ಕಾರ ಮರೆತಂತಿದೆ.

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಚಾರದ ವೇಳೆ ಜವಳಿ ಕ್ಷೇತ್ರದ ಉದ್ಯಮಿದಾರರಿಗೆ ಉಚಿತ ವಿದ್ಯುತ್ ನೀಡುವ ಆಶ್ವಾಸನೆ ನೀಡಿತ್ತು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 5 ತಿಂಗಳು ಗತಿಸಿದರೂ ಆಶ್ವಾಸನೆ ಈಡೇರುವ ಮುನ್ಸೂಚನೆ ದೊರೆಯುತ್ತಿಲ್ಲ. ಜಿಲ್ಲೆಯ ಜವಳಿ ಉದ್ಯಮದಾರರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಜವಳಿ ಕ್ಷೇತ್ರವು ವಿದ್ಯುತ್ ಮೀಟರ್ ಠೇವಣಿ ಮೊತ್ತ ಏರಿಕೆಯಿಂದ ಕಂಗಾಲಾಗಿದೆ. ಈವರೆಗೆ ಒಂದು ಎಚ್‌ಪಿ ಮೀಟರ್ ಅಳವಡಿಕೆಗೆ ಇದ್ದ 100 ರೂ. ಪಾವತಿಯನ್ನು 140 ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಕನಿಷ್ಠ ಪಾವತಿ ದರವನ್ನು ಅಧಿಕಗೊಳಿಸಲಾಗಿದೆ. ಜಿಲ್ಲೆಯಲ್ಲಿ ಬೆಟಗೇರಿ, ಗಜೇಂದ್ರಗಡ ಮತ್ತ್ತು ಶಿಗ್ಲಿಯಲ್ಲಿ ಕೈಮಗ್ಗ/ವಿದ್ಯುತ್ ಮಗ್ಗಗಳ ಉದ್ಯಮ ನೆಲೆಯೂರಿದ್ದು, ಸರ್ಕಾರ ತನ್ನ ಆಶ್ವಾಸನೆಯಂತೆ ಭರವಸೆ ಈಡೇರಿಸಲು ಆಗ್ರಹಿಸಿದ್ದಾರೆ.

ಕಚ್ಚಾ ಸಾಮಗ್ರಿ ಭಾರ

ಈಗಾಗಲೇ ಸೀರೆ ನೇಯ್ಗೆಗೆ ಬಳಸಲಾಗುವ ಕಚ್ಚಾ ಸಾಮಗ್ರಿ ವೆಚ್ಚ ಏರಿಕೆಯಾಗಿದೆ. ಒಂದು ಕೆಜಿ ರೇಷ್ಮೆ ಮೊತ್ತ ಮಾರುಕಟ್ಟೆಯಲ್ಲಿ 5500 ರೂ. ಇದೆ. ಈ ಮೊದಲು 3500 ರೂ. ಇತ್ತು. ಕೆಜಿ ಕಾಟನ್‌ಗೆ ಸರಾಸರಿ 500 ರೂ. ಮೊತ್ತವಿದ್ದು, ಈ ಮೊದಲು ಕೆಜಿಗೆ 360 ರೂ. ಇತ್ತು. ಈ ಎಲ್ಲ ಸಮಸ್ಯೆಗಳ ನಡುವೆ ಚುನಾವಣಾ ನಂತರ ವಿದ್ಯುತ್ ಮೀಟರ ಠೇವಣಿ ಮೊತ್ತ ಹೆಚ್ಚಿಸಲಾಗಿದೆ. ಈ ಬೆಳವಣಿಗೆ ನೇಕಾರರು ಜೀವನ ನಡೆಸಲು ಹೊರೆಯಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ 771 ವಿದ್ಯುತ್ ಮಗ್ಗಗಳ ಗುಡಿಕೈಗಾರಿಕೆ ಇದ್ದು, 3595 ವಿದ್ಯುತ್ ಮಗ್ಗಗಳು, 2370 ಕೈಮಗ್ಗಗಳಿವೆ.

ಜವಳಿ ಉದ್ಯಮಕ್ಕೆ 10 ಎಚ್‌ಪಿ ಮೀಟರ್ ಉಚಿತ ವಿದ್ಯುತ್ ನೀಡುವ ಬಗ್ಗೆ ವಿಧಾನಸೌಧದಲ್ಲಿ ಆಗಸ್ಟ್‌ನಲ್ಲಿ ಜರುಗಿದ ಉನ್ನತಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಮುಂದೆ ಆಡಳಿತಾತ್ಮಕ ಪ್ರಕ್ರಿಯೆ ನಡೆಯದ ಕಾರಣ ಯೋಜನೆ ಜಾರಿ ಆಗಲಿಲ್ಲ. ಈಗ 5 ರಿಂದ 10 ಸಾವಿರ್ ಬಿಲ್ ಪಾವತಿ ಮಾಡುವ ಸ್ಥಿತಿ ಬಂದಿದೆ. ನೇಕಾರರು ಮಧ್ಯಮ ಕುಟುಂಬದ ಜೀವನ ಸ್ಥಿತಿ ಹೊಂದಿದ್ದು, ಇಷ್ಟೊಂದು ಮೊತ್ತ ಪಾವತಿ ಸಾಧ್ಯವೇ? ಎನ್ನುತ್ತಾರೆ ನೇಕಾರರು.

ತರಬೇತಿ ಅಗತ್ಯ:

ರಾಜ್ಯ ವಿದ್ಯುತ್ ಮಗ್ಗ ಸಂಸ್ಥೆಯಿಂದ ಗದಗ ತಾಲೂಕಿನ ನರಸಾಪುರದಲ್ಲಿ ತರಬೇತಿ ಕೇಂದ್ರ ಇದ್ದು, ಕಳೆದ 2 ವರ್ಷದಿಂದ ತರಬೇತಿಗಳೇ ನಡೆದಿಲ್ಲ. ಸೀರೆ ನೇಯುವುದು ಕೌಶಲ ಉದ್ಯಮವಾಗಿದ್ದು ತರಬೇತಿ ಅಗತ್ಯ. ಉಚಿತ ವಿದ್ಯುತ್ ಜತೆಗೆ ಈ ತರಬೇತಿ ಕೇಂದ್ರವನ್ನು ತೆರೆಯಲು ನೇಕಾರರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಮಗ್ಗಗಳ ವಿತರಣೆ
ಅವಧಿ - ವಿತರಣೆ
2011/12 - 73
2012/13 - 19
2013/14 - 75
2014/15 - 37
2015/16 - 45
2016/17 - 10
2017/18 - 71
2018/19 - 00(ಕೋವಿಡ್)
2019/20 - 09
2020/21 - 22

2021/22 - 18

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ 20 ಎಚ್‌ಪಿ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿತ್ತು. ನಂತರ ಉನ್ನತ ಮಟ್ಟದ ಸಭೆ ನಡೆಸಿ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುವುದಾಗಿ ನಿರ್ಣಯ ಕೈಗೊಂಡು ಮೂರ್ನಾಲ್ಕು ತಿಂಗಳು ಗತಿಸಿದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. I ಅನಿಲ್ ಗಡ್ಡಿ, ಜವಳಿ ಉದ್ದಿಮೆದಾರ ಸಂಘದ ಜಿಲ್ಲಾಧ್ಯಕ್ಷ