ಮುದ್ದೇಬಿಹಾಳ: ಎರಡ್ಮೂರು ತಿಂಗಳಿಂದ ಮತಕ್ಷೇತ್ರ ಸೇರಿ ಉತ್ತರ ಕರ್ನಾಟಕದ ರೈತರು ಅತಿವೃಷ್ಟಿಯಿಂದ ಸಂಕಷ್ಟ ಅನುಭವಿಸುತ್ತಿದ್ದರೂ ತಾಲೂಕಾಡಳಿತ ಹಾಗೂ ಶಾಸಕರು ಅವರ ನೋವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಈ ರೀತಿ ಅತಿವೃಷ್ಟಿ& ಅನಾವೃಷ್ಟಿಯಿಂದ ರೈತರ ಕಂಗಾಲಾಗಿದ್ದರು. ಆಗ ಯಡಿಯೂರಪ್ಪನವರು ಅಂತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ವಿತರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಿ ಸಹಾಯ ಹಸ್ತ ಚಾಚಿದ್ದರು ಎಂದರು.
ಆದರೆ, ಈ ಬಾರಿ ಹಿಂದೆಂದೂ ಆಗದ ಭಾರಿ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದ್ದರೂ ಇಂದಿನ ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮೌನವಹಿಸಿದ್ದಾರೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿಗಳಲ್ಲಿ ಪರಿಹಾರ ವಿತರಿಸಲು ಒಂದು ರೂ. ಬಿಡಿಗಾಸೂ ಇಲ್ಲ. ಸದ್ಯ ಮತಕ್ಷೇತ್ರದಲ್ಲಿ ಅಂದಾಜು ಒಂದೂವರೆ ಲಕ್ಷ ಎಕರೆಯಷ್ಟು ಬೆಳೆಹಾನಿಯಾಗಿದೆ. ಅಂದಾಜು 1500 ಮನೆಗಳು ಹಾನಿಗೀಡಾಗಿವೆ. ಆದರೆ ಸ್ಥಳಿಯ ಶಾಸಕರು, ತಾಲೂಕಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಬಡ ರೈತರ ಕಣ್ಣೀರೊರೆಸಲು ಸರ್ಕಾರ ಮುಂದಾಗುತ್ತಿಲ್ಲ. ಈ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದರು.
ಸ್ಥಳಿಯ ಶಾಸಕರು ಇನ್ನೂವರೆಗೂ ಒಂದೇ ಒಂದು ಹಳ್ಳಿಗೂ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿಲ್ಲ. ಅವರು ಸಾಧನೆಯ ಮಾತು ಬಿಟ್ಟು ಅಜ್ಜ&ಅಜ್ಜಿ ಕಥೆ ಹೇಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ದಸರಾ ಹಬ್ಬ ಮುಗಿದ ಕೂಡಲೇ ಶಾಸಕರು, ತಾಲೂಕು ಆಡಳಿತ, ಕೃಷಿ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿ ಪರಿಹಾರ ನೀಡುವ ಕೆಲಸ ಮಾಡದಿದ್ದರೆ ರೈತರೊಂದಿಗೆ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಕಾರ್ಯದರ್ಶಿ ಸಂಜು ಬಾಗೇವಾಡಿ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಶಂಕರಗೌಡ ಶಿವಣಗಿ, ಯುವ ಮೋರ್ಚಾ ಅಧ್ಯ ಗಿರೀಶಗೌಡ ಪಾಟೀಲ ಹಿರೇಮುರಾಳ, ಜಿಲ್ಲಾ ಮುಖಂಡ ಅಶೋಕ ರಾಠೋಡ, ನಾಗೇಶ ಕವಡಿಮಟ್ಟಿ ಇತರರಿದ್ದರು.
ಕೆಲ ಕಾಂಗ್ರೆಸ್ ನಾಯಕರು ಸಮೀಕ್ಷೆಯಲ್ಲಿ ಹಿಂದು ಬರೆಸಬೇಡಿ, ಲಿಂಗಾಯತ ಬರೆಸಿ ಎಂದು ಹೇಳುತ್ತಿದ್ದು, ಇದು ತಪ್ಪು. ಹಿಂದುಗಳು ಹಿಂದು ಎಂದೇ ಬರೆಸುತ್ತಾರೆ. ಇದು ಸಮಾಜ ವಿಭಜಿಸಲು ಮಾಡುತ್ತಿರುವ ಕುತಂತ್ರವಾಗಿದೆ. ಇದಕ್ಕೆ ಜನತೆ ಮನ್ನಣೆ ಕೊಡಲ್ಲ.
> ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕ
ಮುದ್ದೇಬಿಹಾಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಕಾರ್ಯದರ್ಶಿ ಸಂಜು ಬಾಗೇವಾಡಿ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಶಂಕರಗೌಡ ಶಿವಣಗಿ ಇತರರಿದ್ದರು.