ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿ ಮೃತರಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ಕಾರಿ ವೈದ್ಯನನ್ನು ಅಮಾನತು ಮಾಡಲು ಶಾಸಕ ಎ.ಎಸ್.ಪೊನ್ನಣ್ಣ ಆದೇಶಿಸಿದ್ದಾರೆ.
ಗೋಣಿಕೊಪ್ಪಲಿನ ಮೈಸೂರಮ್ಮ ಕಾಲನಿ ನಿವಾಸಿಯಾದ ಗೋವಿಂದಾಚಾರಿ (62) ಗುರುವಾರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಬಳಿಕ ಗೋವಿಂದಚಾರಿ ಅವರ ಮೃತದೇಹವನ್ನು ವಿರಾಜಪೇಟೆ ಶವಗಾರದಲ್ಲಿ ಇರಿಸಲಾಗಿತ್ತು. ರಾತ್ರಿ ಮೃತರ ಪುತ್ರ ಚೇತನ್ ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ ಶ್ರೀನಿವಾಸಮೂರ್ತಿ ಅವರ ಬಳಿ ತಂದೆಯ ಮರಣೋತ್ತರ ಪರೀಕ್ಷೆ ನಡೆಸಲು ಕೋರಿದಾಗ 3 ಸಾವಿರ ರೂ. ಲಂಚ ನೀಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಚೇತನ್ ಮತ್ತು ಸ್ನೇಹಿತರು ವೈದ್ಯರಿಗೆ ಬೇಡಿಕೆ ಇಟ್ಟಿದ್ದ ಹಣವನ್ನು ನೀಡಿದ್ದು, ಈ ದೃಶ್ಯವನ್ನು ವಿಡಿಯೋ ರೇಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಲಂಚ ಸ್ವೀಕರಿಸುತ್ತಿದ್ದ ದೃಶ್ಯ ವೈರಲ್ ಆಗುತ್ತಿದ್ದಂತೆ ಶಾಸಕ ಎ.ಎಸ್.ಪೊನ್ನಣ್ಣ ವೈದ್ಯರ ಅಮಾನತಿಗೆ ಆದೇಶ ನೀಡಿದ್ದು, ಭ್ರಷ್ಟಚಾರ ವಿರೋಧಿ ಕಾಯ್ದೆಯಡಿ ತನಿಖೆಗೂ ಆದೇಶ ಮಾಡಿದ್ದಾರೆ.