ಹುಬ್ಬಳ್ಳಿ: ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ. ಇದೇ ಧೋರಣೆ ಮುಂದುವರಿದರೆ ಬಿಜೆಪಿಯಲ್ಲಿಯ ಮತ್ತಷ್ಟು ಲಿಂಗಾಯತ ಮುಖಂಡರು ಪಕ್ಷಕ್ಕೆ ಗುಡ್ ಬೈ ಹೇಳುತ್ತಾರೆಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಸ್ಥಾನ ಗೆಲ್ಲಬೇಕು ಎಂದರೆ ಪಕ್ಷದ ನಾಯಕತ್ವವನ್ನು ಲಿಂಗಾಯತರಿಗೆ ನೀಡಬೇಕು. ಲಿಂಗಾಯತರನ್ನು ಕಡೆಗಣಿಸಿದರೆ ಬಿಜೆಪಿ ಉಳಿಯುವುದಿಲ್ಲ.
ಲಿಂಗಾಯತರನ್ನು ತುಳಿದರೆ ಪಕ್ಷ ಅಧೋಗತಿಗೆ ಹೋಗಲಿದೆ ಎಂದು ಹರಿ ಹಾಯ್ದರು. ಬಹುತೇಕ ಮುನ್ನೆಲೆಯಲ್ಲಿದ್ದ ಲಿಂಗಾಯತ ನಾಯಕರು ಕಡಿಮೆಯಾಗುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡದೆ ಪಕ್ಷ ತೊರೆಯುವಂತೆ ಮಾಡಿದರು ಎಂದು ಆರೋಪಿಸಿದರು.
ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ರಾಜ್ಯದಲ್ಲಿ ಬಿಜೆಪಿಯಲ್ಲಿರುವ ವೀರಶೈವ ಲಿಂಗಾಯತ ನಾಯಕರನ್ನು ಬೆಳೆಸಬೇಕು. ಪಕ್ಷದಲ್ಲಿ ಕೆಲವರಿಗೆ ನೀಡಿದ ಸ್ಥಾನ ಬದಲಿಸಬೇಕು. ಲಿಂಗಾಯತ ನಾಯಕರ ತುಳಿಯುತ್ತಿರುವವರನ್ನು ಹುಡಕಬೇಕಿದೆ ಎಂದರು.
ಪಕ್ಷ ಬಿಟ್ಟು ಹೋಗುವವರನ್ನು ಮನವೊಲಿಸಿ ಹಿಡಿದಿಟ್ಟುಕೊಳ್ಳಬೇಕು. ಪಕ್ಷದಲ್ಲಿ ಕಡೆಗಣಿಸುತ್ತಿರುವುದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ನಾಯಕರು ನನ್ನನ್ನೂ ಆಹ್ವಾನಿಸಿದ್ದರು. ನಾನು ಹೋಗಲಿಲ್ಲ. ಮುಂದೆಯೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಉಳಿದು ಪಕ್ಷ ಕಟ್ಟುತ್ತೇನೆ. ಇಲ್ಲವಾದಲ್ಲಿ ಉದ್ಯಮ ನೋಡಿಕೊಂಡು ಹೋಗುತ್ತೇನೆ. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಪಕ್ಷದಲ್ಲಿಯ ವಿದ್ಯಮಾನಗಳ ಬಗ್ಗೆ ಗಮನಕ್ಕೆ ತರಲಾಗುವುದು. ಲಿಂಗಾಯತರನ್ನು ಕಡೆಗಣಿಸುವುದು ಸರಿಯಲ್ಲ ಎನ್ನುವುದನ್ನು ಪಕ್ಷದ ನಾಯಕರು ಸಹ ಒಪ್ಪಿಕೊಂಡಿದ್ದಾರೆ ಎಂದರು.
ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿದೆ ಎಂದು ಅನಿಸುತ್ತಿದೆ. ರಾಷ್ಟ್ರೀಯ ನಾಯಕರು ಈ ಬಗ್ಗೆ ಗಮನ ಹರಿಸಬೇಕು. ಬಕೆಟ್ ಹಿಡಿಯುವವರಿಗೆ ಟಿಕೆಟ್ ನೀಡಬಾರದು. ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕು. ಪಕ್ಷದಲ್ಲಿ ಯಾರೂ ಸಹ ನಮ್ಮನ್ನು ಮಾತನಾಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.