ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಜಾಗೃತಿ ಜಾಥಾವನ್ನುದ್ದೇಶಿಸಿ ಡಾ.ಎಲ್.ಎಚ್. ಬಿದರಿ ಮಾತನಾಡಿದರು. ಡಾ. ಬಸವರಾಜ ಹುಬ್ಬಳ್ಳಿ, ಡಾ. ಗೋಪಾಲಕೃಷ್ಣ ದೇಶಪಾಂಡೆ, ಡಾ. ಕವಿತಾ ದೊಡ್ಡಮನಿ ಮತ್ತಿತರರಿದ್ದಾರೆ.  
ಜಿಲ್ಲೆ

ಉತ್ತಮ ಆಹಾರ ವಿಹಾರವೇ ಆರೋಗ್ಯದ ಗುಟ್ಟು; ಡಾ. ಬಿದರಿ

ವಿಜಯಪುರ: ಉತ್ತಮ ಆಹಾರ ಮತ್ತು ವಿಹಾರದಿಂದ ದೀರ್ಘಾಯುಷಿಗಳಾಗಲು ಸಾಧ್ಯ. ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ವ್ಯಾಯಾಮ ಅವಶ್ಯ ಎಂದು ಡಾ.ಎಲ್.ಎಚ್. ಬಿದರಿ ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಡಾ.ಬಿದರಿಯವರ ಅಶ್ವಿನಿ ಆಸ್ಪತ್ರೆ ಹಾಗೂ ಅಶ್ವಿನಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ಸ್‌ನ ಸಹಯೋಗದಲ್ಲಿ ಶನಿವಾರ ವಿಶ್ವ ಹೃದಯ ದಿನಾಚರಣೆ ನಿಮಿತ್ತ ಹಮ್ಮಿಕಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿನಿತ್ಯ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಹೃದಯದ ಕಾಯಿಲೆ ಬರದಂತೆ ನೋಡಿಕೊಳ್ಳಲು ಪ್ರತಿ ದಿನ ಬಿರುಸಿನ ನಡಿಗೆ ರೂಢಿಸಿಕೊಳ್ಳಬೇಕು. ಪ್ರತಿ ವರ್ಷ ತಪ್ಪದೇ ಹೃದಯದ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕೆಂದರು.

ಅಶ್ವಿನಿ ಆಸ್ಪತ್ರೆಯ ಖ್ಯಾತ ಹೃದಯರೋಗ ತಜ್ಞ ಡಾ. ಗೋಪಾಲಕೃಷ್ಣ ದೇಶಪಾಂಡೆ ಮಾತನಾಡಿ, ಸಂಯಮವಿಲ್ಲದ ಜೀವನ ಶೈಲಿ, ಆಹಾರ ಪದ್ಧತಿ, ಧೂಮ್ರಪಾನ, ಒತ್ತಡದ ಬದುಕು ಹೃದಯ ರೋಗಕ್ಕೆ ಕಾರಣವಾಗಿವೆ ಎಂದರು. 30 ವರ್ಷ ಮೇಲ್ಪಟ್ಟ ಎಲ್ಲ ಪುರುಷರು-ಮಹಿಳೆಯರು ಪ್ರತಿ ವರ್ಷ ಹೃದಯದ ತಪಾಸಣೆ ಮಾಡಿಸಿಕೊಂಡು ಮುಂದೆ ಬರುವ ಅಪಾಯವನ್ನು ತಪ್ಪಿಸಬಹುದು ಎಂದರು.

ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡ್ಡಮನಿ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಗುಂಡಬಾವಡಿ ಕೆ.ಡಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಜೈಬುನ್ನಿಸಾ ಬೀಳಗಿ, ಜಿಲ್ಲಾ ಲೆಪ್ರಸಿ ಅಧಿಕಾರಿ ಡಾ. ಸಂಪತ್ ಗುಣಾರಿ, ಡಾ. ಪರಶುರಾಮ ಹಿಟ್ನಳ್ಳಿ, ಜಿ.ಎಂ. ಕೋಳೂರ, ಸುರೇಶ ಹೊಸಮನಿ, ಡಾ. ಪ್ರಿಯದರ್ಶಿನಿ ಪಾಟೀಲ, ಡಾ. ಸುರೇಶ ಪಾಶ್ಚಾಪೂರ, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಚೇರಮನ್ ಶರದ ರೊಡಗಿ, ಪ್ರಕಾಶ ಮಠ, ಶಿವಾನಂದ ಹತ್ತರಕಿ, ಫಿಜಿಶಿಯನ್ ಬಸವರಾಜ ಉಟಗಿ, ಸುನೀಲ ತಾತುಸ್ಕರ, ಸುನೀಲಕುಮಾರ ದೇವೂರ ಮತ್ತಿತರರಿದ್ದರು.

ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾಥಾ ಮಹಾತ್ಮ ಗಾಂಧಿ, ಬಸವೇಶ್ವರ, ಛತ್ರಪತಿ ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಲುಪಿ ಸಮಾಪ್ತಿಗೊಂಡಿತು. ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ರಕ್ತ ದಾನ ಶಿಬಿರದಲ್ಲಿ 18ಜನ ರಕ್ತ ದಾನ ಮಾಡಿದರು.