ನಗರದ ಹೂಟಗಳ್ಳಿಯ ಕೆಎಚ್‌ಬಿ ಕಾಲನಿಯಲ್ಲಿ ಗೃಹಪ್ರವೇಶ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದ ಅಪರಿಚಿತನೊಬ್ಬ ಹಾಡಹಗಲೇ ಚಿನ್ನದ ವ್ಯಾಪಾರಿ ಮತ್ತು ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಬಾಬುರಾವ್ (57), ಇವರ ಪತ್ನಿ ಕಮಲಬಾಯಿ (52) ಚಾಕು ಇರಿತಕ್ಕೆ ಒಳಗಾದವರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಕೈ ಬಳಿ ಇಬ್ಬರಿಗೂ ಸಣ್ಣ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ.
ಅಪರಿಚಿತ ವ್ಯಕ್ತಿ ಬುಧವಾರ ಗೃಹಪ್ರವೇಶ ಆಹ್ವಾನಪತ್ರ ನೀಡುವ ನೆಪದಲ್ಲಿ ಬಾಬುರಾವ್ ಮನೆಗೆ ಬಂದಿದ್ದಾನೆ. ಈ ವೇಳೆ ಬಾಬುರಾವ್ ಪುತ್ರ ಹರೀಶ್ ಬಗ್ಗೆ ವಿಚಾರಿಸಿದ್ದಾನೆ. ಹರೀಶ್ ಮನೇಲಿ ಇಲ್ಲವೆಂದು ಬಾಬುರಾವ್ ತಿಳಿಸಿದ್ದಾರೆ. ತಕ್ಷಣ ಅಪರಿಚಿತ ಬಾಬುರಾವ್ ಹಾಗೂ ಅವರ ಪತ್ನಿ ಕಮಲಬಾಯಿ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.