ಜಿಲ್ಲೆ

ಚಿನ್ನದ ಗಟ್ಟಿ ಪಡೆದು ಆಭರಣ ಮಾಡಿಕೊಡದೆ ವಂಚಿಸಿದ್ದ ಅಕ್ಕಸಾಲಿಗ ಬಂಧನ: 947 ಗ್ರಾಂ ಚಿನ್ನಾಭರಣ ಜಪ್ತಿ

arunakunigal

ಬೆಂಗಳೂರು: ಆಭರಣ ಮಾಡಿಕೊಡುವುದಾಗಿ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿ 55 ಲಕ್ಷ ರೂ. ಮೌಲ್ಯದ 947 ಗ್ರಾಂ ಆಭರಣ ಜಪ್ತಿ ಮಾಡಿದ್ದಾರೆ.

ಸಂಪಂಗಿರಾಮನಗರದ ಅಕ್ಕಸಾಲಿಗ ಸುನೀಲ್ ಕುಮಾರ್ ಬೌಲ್(63) ಬಂಧಿತ. 25 ವರ್ಷದಿಂದ ಅಕ್ಕಸಾಲಿಗನ ಕೆಲಸ ಮಾಡಿಕೊಂಡು ಕುಟುಂಬದ ಜತೆ ನೆಲೆಸಿದ್ದ. ಕಳೆದ ಜುಲೈನಲ್ಲಿ ಜಯನಗರ 5ನೇ ಹಂತದ ಜ್ವಾಲಮಾಲ ಜ್ಯುವೆಲರಿ ಮಾಲೀಕ ರಾಕೇಶ್ ಬೆಳ್ಳೂರು ಬಳಿ 271 ಗ್ರಾಂ ಚಿನ್ನದ ಗಟ್ಟಿ ಪಡೆದು ಆಭರಣ ಮಾಡಿಕೊಡುವುದಾಗಿ ಸುನೀಲ್ ಹೋಗಿದ್ದ. ವಾಪಸ್ ಆಭರಣ ಕೊಟ್ಟಿರಲಿಲ್ಲ. ಇದೇ ರೀತಿ ಜಯನಗರ 4ನೇ ಹಂತದ ಅಲಂಕೃತಿ ಜ್ಯುವೆಲರ್ಸ್‌ ಮಾಲೀಕ ರಾಜೇಶ್ ಪಥಿ ಬಳಿ 116 ಗ್ರಾಂ ಹಾಗೂ ನವರತನ್ ಜ್ಯುವೆಲರ್ಸ್‌ ಬಳಿ 717 ಗ್ರಾಂ ಚಿನ್ನಾಭರಣ ಪಡೆದು ಆರೋಪಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಜಯನಗರ ಮತ್ತು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಪ್ರತ್ಯೇಕವಾಗಿ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದರು. ಮತ್ತೊಂದೆಡೆ ಕುಟುಂಬ ಸದಸ್ಯರು ಸಂಪಂಗಿರಾಮನಗರ ಪೊಲೀಸ್ ಠಾಣೆಗೆ ಸುನೀಲ್ ಕುಮಾರ್ ಕಾಣೆಯಾದ ಕುರಿತು ದೂರು ನೀಡಿದ್ದರು. ಈತ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.

ಇತ್ತೀಚೆಗೆ ಕಬ್ಬನ್ ಪಾರ್ಕ್ ಠಾಣೆಗೆ ಶರಣಾಗಿದ್ದ. ಈ ಬಗ್ಗೆ ಮಾಹಿತಿ ಪಡೆದು ಜಯನಗರ ಪೊಲೀಸರು, ಕೋರ್ಟ್ ಅನುಮತಿ ಪಡೆದು ಹೆಚ್ಚಿನ ವಿಚಾರಣೆಗೆ ಸುನೀಲ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರೋಪಿ ವಂಚನೆ ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿದ್ದ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಕೊನೆಗೆ ಪೊಲೀಸರು ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿದಾಗ ಅವಿನ್ಯೂ ರಸ್ತೆಯ ಮಣಪುರಂ ಗೋಲ್ಡ್ ಫೈನಾನ್ಸ್ ಕಂಪನಿಗೆ ಚಿನ್ನಾಭರಣ ಮತ್ತು ಗಟ್ಟಿ ಮಾರಾಟ ಮಾಡಿರುವುದು ಖಚಿತವಾಗಿತ್ತು. ಈ ಮೇರೆಗೆ 55 ಲಕ್ಷ ರೂ. ಮೌಲ್ಯದ 947 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಷಾರಾಮಿ ಜೀವನ: ಆಭರಣ ಅಂಗಡಿಗಳಿಗೆ ವಂಚನೆ ಮಾಡಿದ್ದ ಚಿನ್ನಾಭರಣ, ಚಿನ್ನದ ಗಟ್ಟಿಯನ್ನು ಮಾರಾಟ ಮಾಡಿ ಕುಟುಂಬ ಸದಸ್ಯರಿಗೆ ತಿಳಿಸದೆ ಉತ್ತರ ಪ್ರದೇಶದಕ್ಕೆ ಹೋಗಿ ಸುನೀಲ್ ಕುಮಾರ್ ಬೌಲ್ ಐಷಾರಾಮಿ ಜೀವನ ನಡೆಸುತ್ತಿದ್ದ. ಹಣ ಖಾಲಿ ಆಗಿರಬೇಕು ಅಥವಾ ಕುಟುಂಬ ಸದಸ್ಯರ ನೆನಪಿಸಿಕೊಂಡು ವಾಪಸ್ ಬಂದಿರಬೇಕು. ವಂಚನೆ ಮಾಡಿದ್ದ ಬಹುತೇಕ ಎಲ್ಲ ಹಣವನ್ನೂ ಮೋಜು-ಮಸ್ತಿಗೆ ಬಳಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.