ಜಿಲ್ಲೆ

ಶೃಂಗೇರಿಯಲ್ಲಿ ವಿಜೃಂಭಣೆಯ ನವರಾತ್ರಿ

ಜಿ.ಹೆಚ್. ಧನ್ಯಕುಮಾರ್

ಶೃಂಗೇರಿ: ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀಮಠದಲ್ಲಿ ಜಗದ್ಗುರು ಶ್ರೀಭಾರತೀತೀರ್ಥ ಮಹಾ ಸ್ವಾಮೀಜಿ ಶ್ರೀಶಾರದಾ ಪ್ರತಿಷ್ಠೆ ಸೇರಿದಂತೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀಜಗನ್ಮಾತೆ ಕೈಯಲ್ಲಿ ಕಮಂಡಲು, ಅಕ್ಷಮಾಲೆ,ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ, ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರನ್ನು ಅನುಗ್ರಹಿಸಿದಳು. ನಾನಾ ಪ್ರಾಂತ್ಯಗಳಿಂದ ಬಂದ ಭಕ್ತರು ಜಗನ್ಮಾತೆ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆದು ಭೋಜನ ಪ್ರಸಾದ ಸ್ವೀಕರಿಸಿದರು. ಮುಖ್ಯಬೀದಿಯ ಎರಡು ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ನವರಾತ್ರಿ ಪ್ರಯುಕ್ತ ಶ್ರೀಮಠದ ಎಲ್ಲಾ ದೇವಾಲಯಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತ್ತಿತ್ತು. ಶ್ರೀಶಾರದೆ ಸನ್ನಿಧಿಯನ್ನು ವೈವಿಧ್ಯಮ ಹೂ ಹಾಗೂ ವಿವಿಧ ಬಣ್ಣದ ಬಳೆಗಳಿಂದ ದೇವಾಲಯವನ್ನು ಅಲಂಕರಿಸಲಾಗಿದೆ.

ಬೆಳಗ್ಗೆ ಜಗನ್ಮಾತೆಯ ವಿಶೇಷ ಪೂಜೆಗಾಗಿ ವಾದ್ಯಗೋಷ್ಠಿಯೊಂದಿಗೆ ಆರ್ಚಕರು ಆನೆ ಮೇಲೆ ಗಂಗೆಯನ್ನು ಹೊತ್ತುಕೊಂಡು ಶ್ರೀಶಾರದಾ ಮಠಕ್ಕೆ ತೆರಳುವ ದೃಶ್ಯವನ್ನು ಭಕ್ತರು ವೀಕ್ಷಿಸಿದರು. ಸಂಜೆ 6 ಗಂಟೆಗೆ ಬೆಂಗಳೂರಿನ ವಿದುಷಿ ಶಿವಪ್ರಿಯಾ ರಾಮಸ್ವಾಮಿ ಮತ್ತು ಸಂಗಡಿಗರಿಂದ ನಾಮ ಸಂಕೀರ್ತನೆ ನೆರವೇರಿತು. ಬೀದಿ ಉತ್ಸವಕ್ಕೆ ಜಗದ್ಗರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಚಾಲನೆ ನೀಡಿದರು.

ಶ್ರೀಮಠದ ಸಂಪ್ರದಾಯದಂತೆ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ದೇವಾಲಯವನ್ನು ಪ್ರವೇಶಿಸಿದ ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿ ಇರುವ ಶ್ರೀಶಾರದೆಯ ಮೂರ್ತಿಯನ್ನು ಬಂಗಾರದ ರಥದಲ್ಲಿ ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ೆಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಅಸೀನರಾದ ನಂತರ ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ, ಸರ್ವವಾದ್ಯಸೇವೆ ನಡೆಯಿತು.ದೇವಿಗೆ ಮಹಾಮಂಗಳಾರತಿ ನೆರವೇರಿತು.