ಎಡೆಯೂರು ಸಿದ್ದಲಿಂಗೇಶ್ವರ ರಥೋತ್ಸವಕ್ಕೆಸಾಕ್ಷಿಯಾದ ಜನಸಾಗರ.  
ಜಿಲ್ಲೆ

ಎಡೆಯೂರಲ್ಲಿ ವೈಭವದ ರಥೋತ್ಸವ

ಉರಿಬಿಸಿಲನ್ನೂ ಲೆಕ್ಕಿಸದೆ ಸಿದ್ದಲಿಂಗೇಶ್ವರನ ತೇರನೆಳೆದ ಸಹಸ್ರಾರು ಭಕ್ತರು

ಕುಣಿಗಲ್​: ತಾಲೂಕಿನ ಪ್ರಸಿದ್ಧ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ಶನಿವಾರ ಸಹಸ್ರ ಭಕ್ತರ ಸಮ್ಮುಖದಲ್ಲಿ ವಿಜಂಭಣೆಯಿಂದ ನೆರವೇರಿತು.

ಶನಿವಾರ ಬೆಳಗ್ಗೆ 11.30ಕ್ಕೆ ನಂದಿಧ್ವಜ ಪೂಜೆ ನೆರವೇರಿತು. ಬಳಿಕ ನಂದಿ ಧ್ವಜವನ್ನು 6.51 ಲಕ್ಕೆ ಮೆಸೂರಿನ ದೀಪಕ್​ ಹರಾಜು ಪಡೆದು ಪ್ರಥಮ ಪೂಜೆ ನೆರವೇರಿಸಿದರು.

ಅಭಿಜಿತ್​ ಮುಹೂರ್ತದಲ್ಲಿ ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಎಡೆಯೂರು ಬಾಳೆ ಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಾ.ಎಚ್​.ಡಿ.ರಂಗನಾಥ್​ ಸೇರಿ ವಿವಿಧ ಸ್ವಾಮೀಜಿಗಳು ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಅಂಗವಾಗಿ ಸಿದ್ಧಲಿಂಗೇಶ್ವರ ಸ್ವಾಮಿ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಉರಿ ಬಿಸಿಲನ್ನೂ ಲೆಕ್ಕಿಸದೇ ಸ್ವಾಮಿಯ ತೇರು ಎಳೆದರು. ಹರಕೆ ಹೊತ್ತ ಭಕ್ತರು ದವನ, ಬಾಳೆಹಣ್ಣು, ಮೆಣಸಿನ ಕಾಳನ್ನು ರಥಕ್ಕೆ ಎಸೆದು ಭಕ್ತಿ ಮೆರೆದರು.

ಕಲಾ ತಂಡಗಳ ಮೆರುಗು

ರಥೋತ್ಸವದಲ್ಲಿ ವೀರಗಾಸೆ ನತ್ಯ, ನಂದಿಧ್ವಜ ಕುಣಿತ, ಚಿಟ್ಟಿಮೇಳ, ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ದೇವಾಲಯದ ಮುಂಭಾಗದ ರಥಬೀದಿಯಲ್ಲಿ ಭಕ್ತರಿಗೆ ಬಿಸಿಲಿನ ಬೇಗೆ ತಣಿಸಲು ಟ್ರಾ$್ಯಕ್ಟರ್​ಗಳಿಂದ ನೀರು ಹಾಕುವ ಮೂಲಕ ತಂಪುಗೊಳಿಸುವ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ದಾಹ ನೀಗಿಸಲು ರಸ್ತೆಯ ಪ್ರಮುಖ ಕಡೆಗಳಲ್ಲಿ ಭಕ್ತರು ನೀರು ಮಜ್ಜಿಗೆ, ಪಾನಕ, ಹೆಸರು ಬೇಳೆ, ಅರವಟಿಕೆ ಸ್ಥಾಪಿಸಿ ವಿತರಿಸಿದರು. ಮಹಾರಥೋತ್ಸವದ ಬಳಿಕ ಅನ್ನದಾಸೋಹ ನೆರವೇರಿತು.

ಸಂಸದರಿಂದ ವಿಶೇಷ ಪೂಜೆ

ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್​.ಮಂಜುನಾಥ್​ ರಥೋತ್ಸವ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ ಸಿದ್ದಲಿಂಗಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು, ರಥೋತ್ಸವದಲ್ಲಿ ತುಮಕೂರು ಉಪ ವಿಭಾಗಾಧಿಕಾರಿ ಗೌರವ್​ಕುಮಾರ್​ಶೆಟ್ಟಿ, ತಹಸೀಲ್ದಾರ್​ ರಶ್ಮಿ ಯು., ದೇವಾಲಯ ಕಾರ್ಯನಿರ್ವಹಣಾಧಿಕಾರಿ ಮಹೇಶ್​ ಭಾಗವಹಿಸಿದ್ದರು.