ಜಿಲ್ಲೆ

ಜಾನಪದ ಸಾಹಿತ್ಯದಲ್ಲಿ ಬದುಕಿನ ದರ್ಶನ

ಬಳ್ಳಾರಿ : ಜಾನಪದ ಸಾಹಿತ್ಯವು ಜನಸಾಮಾನ್ಯರ ನಿತ್ಯ ಬದುಕಿನ ದರ್ಶನವಾಗಿದೆ. ಅವರ ನೋವು, ನಲಿವು, ಜೀವನ ವಿಧಾನ, ಸಂಸ್ಕೃತಿ ಎಲ್ಲವೂ ಅದರಲ್ಲಿ ಮಿಳಿತವಾಗಿದೆ ಎಂದು ಪ್ರೊ.ಮೋನಿಕಾ ರಂಜನ ಹೇಳಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ವೈವಿಧ್ಯಮಯವಾದ ಜನಪದ ಕಲೆಗಳಿವೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರದಾಗಬೇಕೆಂದರು.

ಪ್ರೊ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ಆಧುನಿಕ ಜಗತ್ತಿನ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಕಲೆಗಳು ಇಂದು ನಶಿಸುತ್ತಿವೆ. ಯುವ ಮನಸ್ಸುಗಳಲ್ಲಿ ಜಾನಪದ ಸಾಹಿತ್ಯದ ಬಗೆಗೆ ಅರಿವನ್ನು, ಕಲೆಗಳ ಬಗೆಗೆ ಪ್ರೀತಿಯನ್ನು ಹುಟ್ಟಿಸುವುದು. ಮುಂದಿನ ತಲೆಮಾರಿಗಾಗಿ ಇದನ್ನು ದಾಟಿಸುವುದ ಈ ಕಾರ್ಯಕ್ರಮದ ಮೂಲ ಉದ್ದೇವಾಗಿದೆ ಎಂದರು.

ಪ್ರೊ.ರಾಮಸ್ವಾಮಿ ಮಾತನಾಡಿ, ಜಾನಪದ ಸಾಹಿತ್ಯವು ಮಾನವೀಯ ಮೌಲ್ಯ, ನೀತಿ, ಆದರ್ಶ ಮುಂತಾದ ಗುಣಗಳನ್ನು ಕಟ್ಟಿಕೊಡುತ್ತದೆ. ಬಹಳ ಮುಖ್ಯವಾಗಿ ಜಾನಪದ ಆಟಗಳಿಂದ ಜನರಿಗೆ ಸಂತೋಷವಾಗುವುದರೊಂದಿಗೆ ದೈಹಿಕ ಶ್ರಮ ಕೂಡ ಆಗುತ್ತಿತ್ತು ಎಂದರು.

ಮೆರವಣಿಗೆಯು ಕಾಲೇಜಿನಿಂದ ಆರಂಭವಾಗಿ ಸಂಗಮ್ ವೃತ್ತದವರೆಗೆ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು ವೀರಗಾಸೆ,ಲಂಬಾಣಿ ನೃತ್ಯ, ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಬಯಲಾಟ, ಮಣಿಪುರಿ ನೃತ್ಯ, ಯಕ್ಷಗಾನ ಕಲಾತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ನಂತರ ವೈವಿಧ್ಯಮಯವಾದ ಕಲಾ ಪ್ರದರ್ಶನಗಳು ನಡೆದವು.