ಜಿಲ್ಲೆ

ಜೂಜು ಅಡ್ಡೆ ಮೇಲೆ ದಾಳಿ: ಕೋಲಾರ ಸೈಬರ್ ಕ್ರೈಂ ಇನ್​ಸ್ಪೆಕ್ಟರ್, ಕೆಎಎಸ್​ ಅಧಿಕಾರಿ, ಉಪನ್ಯಾಸಕ ಸೇರಿ ಹಲವರ ಬಂಧನ

ಕೋಲಾರ: ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಕೋಲಾರದ ಸೈಬರ್ ಕ್ರೈಂ ಇನ್​ಸ್ಪೆಕ್ಟರ್, ಕೆಎಎಸ್​ ಅಧಿಕಾರಿ, ಉಪನ್ಯಾಸಕ ಸೇರಿ ಹಲವರನ್ನು ಬಂಧಿಸಿದ್ದಾರೆ.

ಕೋಲಾರದ ಸೈಬರ್ ಕ್ರೈಂ ಇನ್​ಸ್ಪೆಕ್ಟರ್ ಆಗಿರುವ ಆಂಜಿನಪ್ಪ, 3 ದಿನ ರಜೆ ಮೇರೆಗೆ ರಾಜಸ್ತಾನಕ್ಕೆ ತೆರಳಿದ್ದರು. ಜೈಪುರದ ಸಾಯಿಪುರ ಬಾಗ್ ಹೋಟೆಲ್​ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜೈಸಿಂಗೇಪುರ ಖೋರ್ ಠಾಣೆಯ ಪೊಲೀಸರು ದಾಳಿ ಮಾಡಿ 84 ಮಂದಿಯನ್ನು ಭಾನುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 9 ಹುಕ್ಕಾ, 14 ಐಷಾರಾಮಿ ಕಾರು, 1 ಟ್ರಕ್, 23 ಲಕ್ಷಕ್ಕೂ ಅಧಿಕ ಹಣ ಜಪ್ತಿ ಮಾಡಿದ್ದಾರೆ.

ಬಂಧಿತರ ಪೈಕಿ ಕೋಲಾರದ ಇನ್​ಸ್ಪೆಕ್ಟರ್​ ಆಂಜಿನಪ್ಪ, ತಹಸೀಲ್ದಾರ್​ ಮಂಜುನಾಥ್, ಉಪನ್ಯಾಸಕ ರಮೇಶ್, ಆರ್​ಟಿಒ ಸಿಬ್ಬಂದಿ ಶಬರೀಶ್, ನಗರಸಭೆ ನಾಮನಿರ್ದೇಶಿತ ಸದಸ್ಯ ಸತೀಶ್, ಟೊಮ್ಯಾಟೊ ವ್ಯಾಪಾರಿ ಸುಧಾಕರ್ ಇದ್ದಾರೆ. ಕರ್ನಾಟಕ ಮಾತ್ರವಲ್ಲ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಅಧಿಕಾರಿಗಳೂ ಸಿಕ್ಕಿಬಿದ್ದಿದ್ದಾರೆ.